ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಮೊದಲ ಟೆಸ್ಟ್ ಪಂದ್ಯ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂರನೇ ದಿನ 24 ವರ್ಷದ ಇಂಗ್ಲೆಂಡ್ ವಿಕೆಟ್‌ಕೀಪರ್- ಬ್ಯಾಟರ್ ಜೇಮಿ ಸ್ಮಿತ್ ಅದ್ಭುತ ಪ್ರದರ್ಶನ ನೀಡಿದ್ದು, 94 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ 236 ರನ್‌ಗಳಿಗೆ ಆಲೌಟಾಯಿತು. ನಂತರ ಇಂಗ್ಲೆಂಡ್ ಬ್ಯಾಟರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್‌ನ ಈ ಇನ್ನಿಂಗ್ಸ್‌ಗೆ ಯುವ ಆಟಗಾರ ಜೇಮಿ ಸ್ಮಿತ್ ಅವರ ಕೊಡುಗೆ ದೊಡ್ಡದು.

ಸ್ಮಿತ್ ಪಂದ್ಯದ ಮೂರನೇ ದಿನದಂದು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ಅವರು 94 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 148 ಎಸೆತಗಳನ್ನು ಎದುರಿಸಿದ ಸ್ಮಿತ್ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 111 ರನ್ ಕಲೆ ಹಾಕಿದರು.
ಜೇಮಿ ಸ್ಮಿತ್ ಟೆಸ್ಟ್ ಶತಕ ಗಳಿಸಿದ ಇಂಗ್ಲೆಂಡ್‌ನ ಅತ್ಯಂತ ಕಿರಿಯ ವಿಕೆಟ್‌ಕೀಪರ್ ಆಗಿದ್ದಾರೆ. ಅವರು 1930ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಪರ ಟೆಸ್ಟ್ ಶತಕ ಗಳಿಸಿದ್ದ ಲೆಸ್ ಏಮ್ಸ್ ಅವರ ದಾಖಲೆಯನ್ನು ಮುರಿದ್ದಾರೆ. ಏಮ್ಸ್ ಈ ಶತಕವನ್ನು 24 ವರ್ಷ, 63 ದಿನಗಳ ವಯಸ್ಸಿನಲ್ಲಿ ಬಾರಿಸಿದ್ದರು.
ಈಗ ಈ ದಾಖಲೆ 24 ವರ್ಷ, 40 ದಿನಗಳ ವಯಸ್ಸಿನ ಜೇಮಿ ಸ್ಮಿತ್ ಹೆಸರಿನಲ್ಲಿದೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದ ನಾಲ್ಕನೇ ಪಂದ್ಯದಲ್ಲಿ ಈ ಶ್ರೇಷ್ಠ ಸಾಧನೆಯ ಶಿಖರವನ್ನು ಏರಿರುವುದು ವಿಶೇಷವಾಗಿದೆ.
ಇಂಗ್ಲೆಂಡ್ ಪರ ಡಿಸೆಂಬರ್ 2022ರ ನಂತರ ಶತಕ ಹೊಡೆದ ಮೊದಲ ವಿಕೆಟ್‌ಕೀಪರ್-ಬ್ಯಾಟರ್ ಎಂಬ ಹೆಗ್ಗಳಿಕೆ ಸ್ಮಿತ್ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಲಿ ಪೋಪ್ ಕೊನೆಯ ಬಾರಿಗೆ ವಿಕೆಟ್ ಕೀಪಿಂಗ್ ಮಾಡುವಾಗ ಶತಕ ಬಾರಿಸಿದ್ದರು. 18 ತಿಂಗಳ ಹಿಂದೆ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ವಿರುದ್ಧ ಈ ಶತಕ ಗಳಿಸಿದ್ದರು.