ಜಪಾನ್ ಓಪನ್ ಬ್ಯಾಡ್ಮಿಂಟನ್: 2ನೇ ಸುತ್ತಿಗೆ ಪ್ರಣೀತ್ ಪ್ರವೇಶ

ಟೋಕಿಯೋ, ಜುಲೈ 23: ಭಾರತದ ಅನುಭವಿ ಆಟಗಾರ ಬಿ ಸಾಯ್ ಪ್ರಣೀತ್, ಇಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆತೀಥೇಯರ ನೆಚ್ಚಿನ ಆಟಗಾರ ಕೆಂಟೊ ನಿಶಿಮೊಟೊ ಅವರನ್ನು ಬಗ್ಗುಬಡಿದು ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಟೂರ್ನಿಯಲ್ಲಿ ಶ್ರೇಯಾಂಕ ರಹಿತವಾಗಿ ಕಣಕ್ಕಿಳಿದಿರುವ ಪ್ರಣೀತ್, ಮೊದಲ ಸುತ್ತಿನ ಪಂದ್ಯದಲ್ಲಿ 21-17, 21-13 ಅಂತರದ ನೇರ ಗೇಮ್‌ಗಳಿಂದ ಕೇವಲ 42 ನಿಮಿಷಗಳಲ್ಲಿ ಜಪಾನ್ ಆಟಗಾರನ ಸವಾಲು ಮೆಟ್ಟಿನಿಂತರು. ಇದೀಗ ಎರಡನೇ ಸುತ್ತಿನ ಪಂದ್ಯದಲ್ಲೂ ಜಪಾನ್‌ನ ಮತ್ತೊಬ್ಬ ಆಟಗಾರ ಕಂಟಾ ಸುನೆಯಾಮ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ವಿಂಡೀಸ್ ಪ್ರವಾಸದಲ್ಲಿ ಮಿಂಚುವ ತುಡಿತದಲ್ಲಿರುವ ಪ್ರತಿಭೆಗಳಿವರು
ಮತ್ತೊಂದೆಡೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ರೆಟ್ಟಿ ಕೂಡ ಶುಭಾರಂಭ ಮಾಡಿದ್ದಾರೆ. ಅಶ್ವಿನಿ-ಸಾತ್ವಿಕ್ ಜೋಡಿ ಮೊದಲ ಸುತ್ತಿನಲ್ಲಿ 21-14, 21-19 ಗೇಮ್‌ಗಳ ಅಂತರದಲ್ಲಿ ಜರ್ಮನಿಯ ಮರ್ವಿನ್ ಸೀಡೆಲ್ ಮತ್ತು ಲಿಂಡಾ ಎಲ್ಫರ್ ಅವರನ್ನು ಮಣಿಸಿ ಎರಡನೇ ಸುತ್ತು ತಲುಪಿದೆ.
ಆದರೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದ್ದು, ಭಾರತದ ಅಗ್ರಮಾನ್ಯ ಜೋಡಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿ 12-21-, 16-21 ಗೇಮ್‌ಗಳಿಂದ ಮಲೇಷ್ಯಾದ ಗೋ ಜೇ ಫೇ ಮತ್ತು ನೂರ್ ಇಝಾಝುದ್ದೀನ್ ಎದುರು ಸೋಲಿಗೆ ಶರಣಾಯಿತು.
ಇನ್ನು ಭಾರತದ ಸ್ಟಾರ್ ಶೆಟ್ಲರ್‌ಗಳಾದ ಪಿ.ವಿ ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್ ಪ್ರತ್ಯೇಕ ಸಿಂಗಲ್ಸ್ ವಿಭಾಗಗಳಲ್ಲಿ ಬುಧವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಸಿಂಧೂ ಮೊದಲ ಪಂದ್ಯದಲ್ಲಿ ಚೀನಾದ ಯೂ ಹಾನ್ ವಿರುದ್ಧ ಸೆಣಸಲಿದ್ದು, ಶ್ರೀಕಾಂತ್ ಸ್ವದೇಶಿ ಮಿತ್ರ ಆಟಗಾರ ಎಚ. ಎಸ್ ಪ್ರಣೋಯ್ ಎದುರು ಪೈಪೋಟಿ ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications