ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಭಾರತ ಗೆಲುವು ದಾಖಲಿಸಿದೆ. ರೋಹಿತ್ ಶರ್ಮಾ ತನ್ನ ಎರಡನೇ ಮಗುವಿನ ಜನನದ ಕಾರಣ ಭಾರತದಲ್ಲಿದ್ದರು. ಹೀಗಾಗಿ ಅವರ ಅನುಪಸ್ಥಿಯಲ್ಲಿ ಬುಮ್ರಾ ನಾಯಕತ್ವ ವಹಿಸಿಕೊಂಡಿದ್ದರು. ನಾಯಕತ್ವ ಜೊತೆಗೆ ಬುಮ್ರಾ ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಪರಿಣಾಮ ಪರ್ತ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯರನ್ನು 295 ರನ್‌ಗಳಿಂದ ಭಾರತ ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅಡಿಲೇಡ್‌ನಲ್ಲಿ ಡಿಸೆಂಬರ್ 6 ರಿಂದ ಪ್ರಾರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಾರೆ. ಕೇವಲ ಒಂದು ವಿಕೆಟ್ ಪಡೆದು ವಿಶ್ವದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಿಂದ 8 ವಿಕೆಟ್ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಅಡಿಲೇಡ್ ಟೆಸ್ಟ್‌ನಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಲಿದ್ದಾರೆ. 2024 ರಲ್ಲಿ ಬುಮ್ರಾ ಇದುವರೆಗೆ 49 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವರ್ಷ 50 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಲು ಅವರು ಒಂದು ವಿಕೆಟ್ ದೂರದಲ್ಲಿದ್ದಾರೆ. ಅಡಿಲೇಡ್‌ನಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಅವರು 2024 ರಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಬೌಲರ್ ಆಗಲಿದ್ದಾರೆ. ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 46 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಅಶ್ವಿನ್ ಅವರಿಗೆ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ದಾಖಲೆ ಅತ್ಯುತ್ತಮವಾಗಿದೆ. ಅವರು ಇದುವರೆಗೆ ಆಡಿರುವ 41 ಟೆಸ್ಟ್ ಪಂದ್ಯಗಳಲ್ಲಿ 181 ಬ್ಯಾಟರ್‌ಗಳನ್ನು ಬಲಿ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 11 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಪಂದ್ಯದಲ್ಲೂ 10 ವಿಕೆಟ್ ಪಡೆದಿಲ್ಲ. 86 ರನ್‌ಗಳಿಗೆ 9 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಪ್ರಸ್ತುತ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅವರು ಟೀಮ್ ಇಂಡಿಯಾ ಪರ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾ ಅಡಿಲೇಡ್ ಟೆಸ್ಟ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲೂಟಿಸಿ) ಮತ್ತೊಂದು ಸಾಧನೆ ಮಾಡಲ್ಲಿದ್ದಾರೆ. ಡಬ್ಲ್ಯೂಟಿಸಿ
ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪೈಕಿ ಇಂಗ್ಲೆಂಡ್‌ನ ದಂತಕಥೆ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಹಿಂದಿಕ್ಕಲಿದ್ದಾರೆ. ಬುಮ್ರಾ ಡಬ್ಲ್ಯುಟಿಸಿಯಲ್ಲಿ 132 ವಿಕೆಟ್‌ಗಳನ್ನು ಹೊಂದಿದ್ದಾರೆ. ಬ್ರಾಡ್ 134 ವಿಕೆಟ್‌ಗಳೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.