
ಮೆಲ್ಬೋರ್ನ್, ಮೇ 23: ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನು 7 ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಈ ಬಾರಿ ವಿಶ್ವಕಪ್ ಅಂಗಣದಲ್ಲಿ ಅಬ್ಬರಿಸಬಲ್ಲಿ ಮೂವರು ವೇಗಿಗಳಲ್ಲಿ ಭಾರತದ ಜಸ್‌ಪ್ರೀತ್ ಬುಮ್ರಾ ಕೂಡ ಒಬ್ಬರು ಎಂದು ಆಸ್ಟ್ರೇಲಿಯಾ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಭವಿಷ್ಯ ನುಡಿದಿದ್ದಾರೆ.
"ಅವರು ಅದ್ಭುತ ಬೌಲರ್. ಅವರ ದಾಖಲೆಗಳು ಉತ್ತಮವಾಗಿವೆ. ಮಿಂಚಿನ ಯಾರ್ಕರ್ ಮತ್ತು ಉತ್ತಮ ವೇಗ ಅವರ ಬತ್ತಳಿಕೆಯಲ್ಲಿದೆ,'' ಎಂದು ಏಕದಿನ ಕ್ರಿಕೆಟ್‌ನಲ್ಲಿ 49 ಪಂದ್ಯಗಳಿಂದ 89 ವಿಕೆಟ್‌ಗಳನ್ನು ಉರುಳಿಸಿರುವ ಬುಮ್ರಾ ಕುರಿತಾಗಿ 2003ರ ವಿಶ್ವ ಚಾಂಪಿಯನ್ ತಂಡದ ಸದಸ್ಯ ಬ್ರೆಟ್ ಲೀ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಬುಮ್ರಾ ಹೊರತಾಗಿ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಕೂಡ ಮೇ 30ರಂದು ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಬಲ್ಲ ವೇಗಿಗಳು ಎಂದು ಬ್ರೆಟ್ ಲೀ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
"ಮಿಚೆಲ್ ಸ್ಟಾರ್ಕ್ ಅವರನ್ನು ಹೆಸರಿಸಲೇ ಬೇಕು. ಸ್ಟಾರ್ಕ್ ಎಡಗೈ ವೇಗದ ಬೌಲರ್. ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಲಯದಲ್ಲಿ ಇದ್ದ ಸಂದರ್ಭದಲ್ಲಿ ಕಳೆಡದ ವರ್ಷ ಫೆಬ್ರವರಿಯಲ್ಲಿ ಎದೆ ಭಾಗದಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು. ಆದರೂ, ಅವರಲ್ಲಿ ಸಾಕಷ್ಟು ಗುಣಮಟ್ಟವಿದೆ. ಅವರಲ್ಲಿನ ವೇಗ ಅವರ ಕೈ ಹಿಡಿದರೆ ಎದುರಾಳಿಗಳು ಅವರ ಬೌಲಿಂಗ್ ಎದುರಿಸುವುದು ಸುಲಭವಲ್ಲ,'' ಎಂದು 2015ರ ವಿಶ್ವಕಪ್‌ನಲ್ಲಿ 22 ವಿಕೆಟ್‌ಳನ್ನು ಉರುಳಿಸಿ ಟೂರ್ನಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದ ಸ್ಟಾರ್ಕ್ ಅವರನ್ನು ಲೀ ಗುಣಗಾನ ಮಾಡಿದ್ದಾರೆ.
"ಪ್ಯಾಟ್ ಕಮಿನ್ಸ್ ಅವರಲ್ಲಿ ಉತ್ತಮ ವೇಗವಿದೆ. ಅಂತೆಯೇ ನಿಖರವಾಗಿ ಬೌಲಿಂಗ್ ಮಾಡುವ ಮೂಲಕ ಕೆಲ ಬದಲಾವಣೆಗಳನ್ನೂ ತರುತ್ತಾರೆ. ಎಲ್ಲವನ್ನೂ ಮಾಡುವ ಸಾಮರ್ಥ್ಯ ಅವರಲ್ಲಿದೆ,'' ಎಂದು ಕಮಿನ್ಸ್ ಪ್ರದರ್ಶನವನ್ನು ಲೀ ಹೊಗಳಿದ್ದಾರೆ. ಈ ವರ್ಷ ಆಡಿರುವ 6 ಪಂದ್ಯಗಳಲ್ಲಿ ಕಮಿನ್ಸ್ 14.29ರ ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ.