ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ವಿಶೇಷವಾಗಿತ್ತು. ಈ ಟೆಸ್ಟ್ ಪಂದ್ಯದಲ್ಲಿ ಇವರು ಇನ್ನು ಮೈದಾನಕ್ಕೆ ಇಳಿದಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಂತೆ ವಿರಾಟ್, ರೋಹಿತ್ ಜೊತೆಗೆ ಎಲೈಟ್ ಕ್ಲಬ್‌ಗೆ ಎಂಟ್ರಿ ಪಡೆದರು. ಅವರು ಮಾಡಿದ ಆ ಸಾಧನೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿಯ ಅಂಗಳದಲ್ಲಿ ಶುಭಮನ್ ಗಿಲ್ ಅಂಗಳಕ್ಕೆ ಇಳಿಯುತ್ತಲೆ ಸಾಧನೆ ಮಾಡಿದರು. ಟಾಸ್ ಗೆದ್ದು ಮುಖದಲ್ಲಿ ಮಂದಹಾಸ ಕಂಡರು. ಸತತ ಆರು ಟಾಸ್ ಸೋತಿದ್ದ ಗಿಲ್ ಇದೇ ಮೊದಲ ಬಾರಿಗೆ ತಾವು ನಾಯಕರಾದ ಬಳಿಕ ಟಾಸ್ ಗೆದ್ದರು. ಈ ವೇಳೆ ತಂಡವನ್ನು ಪ್ರಕಟಿಸಿದಾಗ, ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದರು. ಈ ಮೂಲಕ ಯಾರ್ಕರ್ ಸ್ಪೇಷಲಿಸ್ಟ್ ಖ್ಯಾತಿಯ ಜಸ್ಪ್ರೀತ್ ಬುಮ್ರಾ ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 50ನೇ ಪಂದ್ಯವನ್ನು ಆಡಲು ಸಜ್ಜಾದರು. ಈ ಮೂಲಕ ಬುಮ್ರಾ ಎಲೈಟ್ ಕ್ಲಬ್‌ಗೆ ಎಂಟ್ರಿ ಪಡೆದರು.

ಭರವಸೆಯ ಬೌಲರ್ ಬುಮ್ರಾ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಫಾರ್ಮೆಟ್‌ಗಳಲ್ಲಿ 50ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಬರೆದರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಏಳು ಆಟಗಾರರು ಮಾತ್ರ ಮೂರು ಸ್ವರೂಪದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಿಗಿಂತಲೂ ಮೊದಲು ಈ ಸಾಧನೆಯನ್ನು ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಕೆಎಲ್ ರಾಹುಲ್ ಮಾತ್ರ ಮಾಡಿದ್ದರು. ಈಗ ಈ ಸಾಲಿಗೆ ಜಸ್ಪ್ರೀತ್ ಬುಮ್ರಾ ಎಂಟ್ರಿ ಪಡೆದಿದ್ದಾರೆ.
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ನೂರು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿ ದೊಡ್ಡದಿದೆ. ಆದರೆ ಈ ಆಟಗಾರರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಹೆಚ್ಚಾಗಿ ಆಡಿಲ್ಲ. ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಆಟಗಾರ. ವಿದೇಶಿ ಪಿಚ್‌ಗಳಲ್ಲಿ ಬುಮ್ರಾ ಇಲ್ಲದೇ ಇದ್ದರೆ ತಂಡಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಇವರು ತಮ್ಮ ಕರಾರುವಾಕ್ ಯಾರ್ಕರ್‌ಗಳಿಂದಲೇ ಹೆಸರುವಾಸಿ.

31 ವರ್ಷದ ಜಸ್ಪ್ರೀತ್ ಬುಮ್ರಾ 49 ಟೆಸ್ಟ್ ಪಂದ್ಯಗಳಲ್ಲಿ 19.81ರ ಸರಾಸರಿಯಲ್ಲಿ 222 ವಿಕೆಟ್ ಕಬಳಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಪಿನ್ ಟ್ರ್ಯಾಕ್ ಆಗಿರಲಿ, ಬೌನ್ಸ್ ಟ್ರ್ಯಾಕ್ ಆಗಿರಲಿ ಬುಮ್ರಾ ಅವರ ಕೈಯಲ್ಲಿ ಚೆಂಡು ಸಿಕ್ಕರೆ ಅವರು ಹೇಳಿದಂತೆ ಕೇಳುತ್ತದೆ. ವರ್ಕ್ ಲೋಡ್ ನೋಡಿಕೊಂಡು ಪಂದ್ಯಗಳನ್ನು ಆಡುವಲ್ಲಿ ಬುಮ್ರಾ ಬೆಸ್ಟ್.