ಪಾದಾರ್ಪಣೆ ವೇಳೆ ಧೋನಿಯಾಡಿದ ಮಾತು ನೆನೆದ ಜಸ್‌ಪ್ರೀತ್ ಬೂಮ್ರಾ

ವೆಲ್ಲಿಂಗ್ಟನ್, ಫೆಬ್ರವರಿ 24: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ತನ್ನ ಬೌಲಿಂಗ್ ಪ್ರದರ್ಶನದ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಲೋಕದಲ್ಲಿ ಟೀಕೆಗಳು ಕೇಳಿಬರುತ್ತಿವೆ. ಬೆನ್ನು ನೋವಿನಿಂದ ಚೇತರಿಸಿ ದೀರ್ಘ ಕಾಲದ ಬಳಿಕ ಆಟ ಆರಂಭಿಸಿರುವ ಬೂಮ್ರಾ ತನ್ನ ಬೌಲಿಂಗ್ ಪ್ರಖರತೆ ಕಳೆದುಕೊಂಡಿರುವುದು ನಿಜವೆ.
ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಒಟ್ಟು 88 ರನ್ ನೀಡಿದ್ದ ಜಸ್‌ಪ್ರೀತ್ ಬೂಮ್ರಾ ಮುರಿದಿದ್ದು ಕೇವಲ 1 ವಿಕೆಟ್ ಮಾತ್ರ.
ಪಂದ್ಯದಲ್ಲಿ ಕಿವೀಸ್ ಭರ್ಜರಿ 10 ವಿಕೆಟ್ ಗೆಲುವನ್ನಾಚರಿಸಿ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ದ್ವಿತೀಯ ಪಂದ್ಯ ಫೆಬ್ರವರಿ 29ರಿಂದ ಆರಂಭವಾಗಲಿದೆ.

ಬೂಮ್ರಾಗೂ ನಿಜ ಅರಿವಾಗಿರಬೇಕು
ಡೆತ್ ಓವರ್‌ನಲ್ಲಿ ಅಪಾಯಕಾರಿಯಾಗಿ ಕಂಡು ಬರುತ್ತಿದ್ದಕ್ಕಾಗಿ ಬೂಮ್ರಾ ವಿಶ್ವದಲ್ಲೇ ಶ್ರೇಷ್ಠ ಬೌಲರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದವರು. ಆದರೆ ಸದ್ಯ ಕೊಂಚ ಫಾರ್ಮ್ ಕಳೆದುಕೊಂಡಿರುವುದ ಬಗ್ಗೆ ಸ್ವತಃ ಅವರಿಗೂ ಅರಿವಾಗಿರಬೇಕು. ತಾನು ಟೀಕಿಸಲ್ಪಡುತ್ತಿರುವ ಈ ದಿನಗಳಲ್ಲಿ ಬೂಮ್ರಾ, ಮಾಜಿ ನಾಯಕ ಎಂಎಸ್ ಧೋನಿ ಹೇಳಿದ ಮಾತನ್ನು ನೆಪಿಸಿಕೊಂಡಿದ್ದಾರೆ.

ಜಸ್‌ಪ್ರೀತ್ ಅಂತಾರಾಷ್ಟ್ರೀಯ ಪಾದಾರ್ಪಣೆ
26ರ ಹರೆಯದ ಜಸ್‌ಪ್ರೀತ್ ಬೂಮ್ರಾ, 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಪಾದಾರ್ಪಣೆ ಪಂದ್ಯದ ವೇಳೆಯೂ ಬೂಮ್ರಾ ಉತ್ತಮ ಪ್ರದರ್ಶನಕ್ಕಾಗಿ ಗಮನ ಸೆಳೆದಿದ್ದರು. ಆಗ 10 ಓವರ್‌ಗಳಲ್ಲಿ 40 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಈ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು.

ಕೂಲ್ ಕ್ಯಾಪ್ಟನ್ ಸ್ಫೂರ್ತಿಯ ಮಾತು
ತಾನು ಪಾದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ತಂಡದ ನಾಯಕನಾಗಿದ್ದ ಕೂಲ್ ಕ್ಯಾಪ್ಟನ್ ಧೋನಿ ತನಗೆ ಹೇಳಿದ ಮಾತನ್ನು ಬೂಮ್ರಾ ಸ್ಮರಿಸಿಕೊಂಡಿದ್ದಾರೆ. 'ಆದಿನ ನನ್ನ ಹತ್ತಿರ ಯಾರೂ ಬರಲಿಲ್ಲ. ಯಾರೂ ಏನೂ ಹೇಳಲೂ ಇಲ್ಲ. ಆದರೆ ಧೋನಿ ನನ್ನ ಬಳಿ ಬಂದರು, ಬಂದು ಹೇಳಿದರು; 'ನಿನ್ನ ಹಾಗೆ ನೀನಿರು, ಆಟವನ್ನು ಎಂಜಾಯ್ ಮಾಡು' ಅಂತ' ಎಂದು ಬೂಮ್ರಾ ಧೋನಿಯನ್ನು ನೆನಪಿಸಿಕೊಂಡಿದ್ದಾರೆ.

ಏಕದಿನ ಸರಣಿಯಲ್ಲಿ ಇನ್ನೂ ಕಳಪೆ ಪ್ರದರ್ಶನ
ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಬೂಮ್ರಾ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಮೊದಲ ಟೆಸ್ಟ್‌ನಲ್ಲೂ ಬೂಮ್ರಾಗೆ ಕಿವೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಲಭಿಸಿದ್ದು ಮಾತ್ರ. ಆದರೆ ತಾವು ಸೋತಂತೆ ಭಾಸವಾಗೋ ಸಂದರ್ಭ ಬಂದಾಗ ಅದನ್ನು ತಲೆಗೆ ಹಚ್ಚಿಕೊಳ್ಳದೆ ಎಲ್ಲವನ್ನೂ ಎದುರುಗೊಳ್ಳಬೇಕು ಎಂಬರ್ಥದಲ್ಲಿ ಧೋನಿ ಸ್ಫೂರ್ತಿಯ ಮಾತು ಹೇಳಿದ್ದನ್ನು ಬೂಮ್ರಾ ಈ ಸಂದರ್ಭದಲ್ಲಿ ನೆನಪಿಗೆ ತಂದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications