ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 387 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಪ್ರವಾಸಿ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಮಾರಕ ದಾಳಿಯನ್ನು ಸಂಘಟಿಸಿದರು. ಈ ಮೂಲಕ ಆತಿಥೇಯ ತಂಡದ ಬೌಲರ್‌ಗಳನ್ನು ಕಾಡಿದರು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಕರಾರುವಕ್‌ದಾಳಿಯಿಂದ ಎದುರಾಳಿಗಳನ್ನು ಕಾಡಿದರು. ಅಲ್ಲದೆ 74 ರನ್ ನೀಡಿ 5 ವಿಕೆಟ್ ಪಡೆದರು. ಅಲ್ಲದೆ ಹಾನರ್ಸ್ ಬೋಲ್ಡ್‌ನಲ್ಲಿ ತಮ್ಮ ಹೆಸರನ್ನು ನಮೂದಿಸಿದರು.
ಲೀಡ್ಸ್ ಪಂದ್ಯದ ಬಳಿಕ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಿಂದ ವಿಶ್ರಾಂತಿ ಪಡೆದಿದ್ದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಲಾರ್ಡ್ಸ್‌ನಲ್ಲಿ ಮೈದಾನಕ್ಕೆ ಇಳಿದರು. ಈ ವೇಳೆ ಆರಂಭದಿಂದಲೂ ಬಿಗುವಿನ ದಾಳಿ ನಡೆಸಿದ ಬುಮ್ರಾ ಅಬ್ಬರಿಸಿದರು. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರಾದ ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೋ ರೂಟ್, ಕ್ರಿಸ್ ವೋಕ್ಸ್, ಜೋಫ್ರಾ ಆರ್ಚರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ಅಬ್ಬರಿಸಿದರು. ಈ ಮೂಲಕ ವಿದೇಶಿ ನೆಲದಲ್ಲಿ ಬುಮ್ರಾ ಮತ್ತೊಮ್ಮೆ 5 ವಿಕೆಟ್ ಪಡೆದ ಸಾಧನೆ ಮಾಡಿದರು.

ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಐದು ವಿಕೆಟ್ ಪಡೆಯುವ ಮೂಲಕ ವಿದೇಶಿ ನೆಲದಲ್ಲಿ ಅತಿ ಹೆಚ್ಚು ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಬುಮ್ರಾ ವಿದೇಶಿ ನೆಲದಲ್ಲಿ 13 ಬಾರಿ ಈ ಸಾಧನೆ ಮಾಡಿದ್ದಾರೆ. ವಿದೇಶಿ ನೆಲದಲ್ಲಿ ಅನಿಲ್ ಕುಂಬ್ಳೆ (10), ಇಶಾಂತ್ ಶರ್ಮಾ (9), ನಂತರದ ಸ್ಥಾನದಲ್ಲಿದ್ದಾರೆ. ಉಳಿದಂತೆ ಆರ್ ಅಶ್ವಿನ್, ಬಿಎಸ್ ಚಂದ್ರಶೇಖರ್, ಜಹೀರ್ ಖಾನ ತಲಾ 8 ಬಾರಿ ಈ ಸಾಧನೆ ಮಾಡಿದ್ದರು.
ಒಟ್ಟಾರೆ ಬುಮ್ರಾ 47 ಟೆಸ್ಟ್ ಪಂದ್ಯಗಳಲ್ಲಿ 15 ಬಾರಿ ಐದು ವಿಕೆಟ್ ಪಡೆದಿದ್ದಾರೆ. ಈ ಮೂಲಕ 215 ವಿಕೆಟ್ ಪಡೆದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಟೀಮ್ ಇಂಡಿಯಾದ ದಿಗ್ಗಜ ಆಲ್‌ರೌಂಡರ್ ಕಪಿಲ್ ದೇವ್ ಹೆಸರಿನಲ್ಲಿತ್ತು. ಇವರು ವಿದೇಶಿ ನೆಲದಲ್ಲಿ ಒಟ್ಟು 12 ಬಾರಿ ಈ ಸಾಧನೆಯನ್ನು ಮಾಡಿದ್ದರು.

ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಗಿದೆ. ಆತಿಥೇಯ ತಂಡದ ಪರ ಸ್ಟಾರ್ ಆಟಗಾರ ಜೋ ರೂಟ್ 10 ಬೌಂಡರಿ ನೆರವಿನಿಂದ 104 ರನ್ ಸಿಡಿಸಿ ಅಬ್ಬರಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ (51 ರನ್) ಹಾಗೂ ಬ್ರೈಡನ್ ಕಾರ್ಸೆ (56 ರನ್) ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಭಾರತದ ಪರ ಬುಮ್ರಾ 5 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.