
ಲಂಡನ್, ಮೇ 26: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ, ದ್ವೀಪ ರಾಷ್ಟ್ರದ ಈ ಬಾರಿಯ ವಿಶ್ವಕಪ್ ಅಭಿಯಾನದಲ್ಲಿ ತಾವು ಯಾವುದೇ ಜವಾಬ್ದಾರಿ ನಿಭಾಯಿಸುವುದಿಲ್ಲ ಎಂದು ಹೇಳಿದ್ದಾರೆ.
"ವಿಶ್ವಕಪ್ ವೇಳೆ ಶ್ರೀಲಂಕಾ ತಂಡಕ್ಕೆ ನೆರವಾಗುವಂತೆ ಹಲವು ಬಾರಿ ಆಹ್ವಾನ ಸಿಕ್ಕಿದೆ. ಆದರೆ, ಬೇರೆ ಕೆಲಸಗಳಲ್ಲಿ ನಿರತನಾಗಿದ್ದೇನೆ. ಪ್ರಮುಖವಾಗಿ ಶ್ರೀಲಂಕಾ ತಂಡದಲ್ಲಿ ನಾನು ವಹಿಸಬೇಕಾಗಿರುವ ಪಾತ್ರವೇನು ಎಂಬುದರ ಸ್ಪಷ್ಟತೆ ಇಲ್ಲವಾಗಿದೆ,' ಎಂದು ಸಂದರ್ಶನವೊಂದರಲ್ಲಿ ಜಯವರ್ಧನೆ ಹೇಳಿಕೊಂಡಿದ್ದಾರೆ.
"ತಾಂತ್ರಿಕವಾಗಿ ತಂಡದಲ್ಲಿಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅರ್ಧದವಿಲ್ಲ. ತಂಡದ ಆಯ್ಕೆ ಮತ್ತಿತ್ತರ ಎಲ್ಲಾ ಸಂಗತಿಗಳನ್ನು ನಡೆಸುವಾಗ ನನ್ನ ಅಭಿಪ್ರಾಯವನ್ನು ಕೇಳುವ ಗೋಜಿಗೂ ಹೋಗಿಲ್ಲ. ಹೀಗಿರುವಾಗ ತಂಡದ ಜೊತೆಗೆ ಕಾರ್ಯ ನಿರ್ವಹಿಸುವ ಮಾತೇ ಇಲ್ಲ,'' ಎಂದು ಜಯವರ್ಧನೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
"ಆದರೂ ತಂಡದ ನಿರ್ವಹಣೆ ವಿಚಾರದಲ್ಲಿ ಅಲ್ಪ ಕೊಡುಗೆ ಸಲ್ಲಿಸಬಲ್ಲ. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜೊತೆಗೆ ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ಇದು ನನಗೆ ಸೂಕ್ತವಾದ ಜಾಗ ಅಲ್ಲ ಎಂಬುದು ಅರ್ಥವಾಗಿದೆ,'' ಎಂದು ಕ್ರಿಕೆಟ್ ಶ್ರೀಲಂಕಾ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದಕ್ಕೂ ಮೊದಲು ಶ್ರೀಲಂಕಾದ ದೇಶಿ ಕ್ರಿಕೆಟ್ ಟೂರ್ನಿಯ ಮಾದರಿಯಲ್ಲಿ ಬದಲಾವಣೆ ತರುವಂತೆ ಜಯವರ್ಧನ ಪ್ರಸ್ಥಾವನೆ ಇಟ್ಟಿದ್ದರು. ಆದರೆ, ಇದಕ್ಕೆ ಯಾರಿಂದಲೂ ಬೆಂಬಲ ಸಿಗಲಿಲ್ಲ. ಜಯವರ್ಧನೆ, ಕುಮಾರ ಸಂಗಕ್ಕಾರ ಮತ್ತು ಅರವಿಂದ ಡಿ'ಸಿಲ್ವಾ ಅವರನ್ನೊಳಗೊಂಡ ಸಮಿತಿ ಕಳೆದ ವರ್ಷ ಈ ಪ್ರಸ್ಥಾವನೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಎದುರು ಇರಿಸಿತ್ತು. ಆದರೆ, ಇದನ್ನು ಕಡೆಗಣಿಸಲಾಗಿತ್ತು.
"ಎಂಟು ತಿಂಗಳ ಸಮಯ ತೆಗೆದುಕೊಂಡು ವೃತ್ತಿಪರ ಕ್ರಿಕೆಟ್ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದೆವು. ಅವರಿಗಾಗಿ ಈ ಯೋಜನೆಯನ್ನು ಮುಂದಿಟ್ಟಿದ್ದೆವು. ಆದರೆ ಇದನ್ನು ತಿರಸ್ಕರಿಸಲಾಯಿತು. ನಮ್ಮ ಆಟಗಾರರು ಲೀಗ್ ಕ್ರಿಕೆಟ್ ಸಲುವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗೆ ತೆರಳುವುದನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಈ ಅನುಭವಿ ಆಟಗಾರರು ನಮ್ಮಲ್ಲಿಯೇ ಉಳಿಯಬೇಕು ಎಂಬುದು ನಮ್ಮ ನಿಲುವಾಗಿತ್ತು,'' ಎಂದು ಜಯವರ್ಧನೆ ಹೇಳಿದ್ದಾರೆ.