ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ನ ಜೋ ರೂಟ್ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ 11,000 ರನ್‌ಗಳ ಗಡಿಯನ್ನು ದಾಟಿದರು. ಪಂದ್ಯಗಳ ವಿಷಯದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಆಟಗಾರ ಎನಿಸಿಕೊಂಡರು. ತಮ್ಮ 130ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಶುಕ್ರವಾರ ಜೂನ್ 2ರಂದು ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಜೋಟ್ ರೂಟ್ ಅರ್ಧಶತಕ, ಬೆನ್ ಡಕೆಟ್ ಅವರ 178 ಎಸೆತಗಳಲ್ಲಿ 182 ರನ್ ಮತ್ತು ಒಲ್ಲಿ ಪೋಪ್ 208 ಎಸೆತಗಳಲ್ಲಿ 205 ಅತ್ಯುತ್ತಮ ದ್ವಿಶತಕದಿಂದಾಗಿ ಇಂಗ್ಲೆಂಡ್ ತಂಡ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಅರ್ಧಶತಕದ ಕೊಡುಗೆ ನೀಡಿದರು. ಇದೇ ವೇಳೆ ಎಲೈಟ್ ಗುಂಪಿಗೆ ಸೇರಿದರು. ಜೋ ರೂಟ್ 59 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಮೇತ 56 ರನ್ ಬಾರಿಸಿ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು. ಕರ್ಟಿಸ್ ಕ್ಯಾಂಫರ್ ಬೌಲಿಂಗ್‌ನಲ್ಲಿ 52 ರನ್‌ಗಳನ್ನು ತಲುಪಿದಾಗ ಟೆಸ್ಟ್ ಕ್ರಿಕೆಟ್‌ನಲ್ಲಿ 11,000 ರನ್‌ಗಳ ಹೆಗ್ಗುರುತನ್ನು ದಾಖಲಿಸಿದರು.
ಇಂಗ್ಲೆಂಡ್ ಶ್ರೇಷ್ಠ ಆಟಗಾರ ಅಲೆಸ್ಟರ್ ಕುಕ್ ನಂತರ ಈ ಸಾಧನೆ ಮಾಡಿದ ಎರಡನೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೋ ರೂಟ್ 11,004 ರನ್‌ಗಳೊಂದಿಗೆ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಇಂಗ್ಲೆಂಡ್‌ನ ಮಾಜಿ ನಾಯಕ ಅಲೆಸ್ಟರ್ ಕುಕ್ 12,472 ರನ್ ಗಳಿಸಿ ಇಂಗ್ಲೆಂಡ್ ಪರ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಜೋ ರೂಟ್ 50.46ರ ಅತ್ಯುತ್ತಮ ಸರಾಸರಿಯೊಂದಿಗೆ 58 ಅರ್ಧಶತಕಗಳು ಮತ್ತು 29 ಶತಕಗಳನ್ನು ಬಾರಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯುಟಿಸಿ) 2021-23ರ ಚಕ್ರದಲ್ಲಿ ಆಡಿರುವ 22 ಪಂದ್ಯಗಳಲ್ಲಿ ಆರು ಅರ್ಧಶತಕಗಳು ಮತ್ತು ಎಂಟು ಶತಕಗಳು ಸೇರಿದಂತೆ 1915 ರನ್‌ಗಳೊಂದಿಗೆ ಜೋ ರೂಟ್ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
ಐರ್ಲೆಂಡ್ ವಿರುದ್ಧದ ಪಂದ್ಯದ ಕುರಿತು ಹೇಳುವುದಾದರೆ, ಜೋ ರೂಟ್ ಮೂರನೇ ವಿಕೆಟ್‌ಗೆ ಒಲ್ಲಿ ಪೋಪ್‌ರೊಂದಿಗೆ 146 ರನ್‌ಗಳ ಜೊತೆಯಾಟ ನೀಡಿದರು.
ಜೋ ರೂಟ್ ಅವರು 56 ರನ್ ಗಳಿಸಿದ್ದಾಗ ಆಂಡಿ ಮೆಕ್‌ಬ್ರೈನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು ಸ್ಟುವರ್ಟ್ ಬ್ರಾಡ್ ಅವರ ಐದು ವಿಕೆಟ್‌ಗಳ ಗೊಂಚಲು ಸಹಾಯದಿಂದ ಐರ್ಲೆಂಡ್ ತಂಡವನ್ನು 172 ರನ್‌ಗಳಿಗೆ ಆಲೌಟ್ ಮಾಡಲಾಗಿತ್ತು.
ನಿರ್ಣಾಯಕ ಆಶಸ್ 2023 ಜೂನ್ ಮಧ್ಯದಲ್ಲಿ ಆರಂಭವಾಗಲಿದ್ದು, ಆಶಸ್ ಟ್ರೋಫಿ ಗೆಲ್ಲುವ ದಾರಿಯಲ್ಲಿ ಜೋ ರೂಟ್ ತಮ್ಮ ಉತ್ತಮ ಫಾರ್ಮ್ ಅನ್ನು ಕಾಪಾಡಿಕೊಳ್ಳಲು ಎದುರು ನೋಡುತ್ತಾರೆ.
ವೇಗವಾಗಿ 11,000 ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು (ಪಂದ್ಯಗಳ ಪ್ರಕಾರ)
1) ಜೋ ರೂಟ್ - ಇಂಗ್ಲೆಂಡ್ - 130ನೇ ಪಂದ್ಯ
2) ಬ್ರಿಯಾನ್ ಲಾರಾ - ವೆಸ್ಟ್ ಇಂಡೀಸ್ - 131ನೇ ಪಂದ್ಯ
3) ಕುಮಾರ ಸಂಗಕ್ಕಾರ - ಶ್ರೀಲಂಕಾ - 134ನೇ ಪಂದ್ಯ
4) ಮಹೇಲ ಜಯವರ್ಧನೆ - ಶ್ರೀಲಂಕಾ - 149ನೇ ಪಂದ್ಯ