ಗುರುವಾರ, ಜನವರಿ 25ರಿಂದ ಹೈದರಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಆರಂಭವಾಗಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಹೊಸ ಮೈಲಿಗಲ್ಲು ನಿರ್ಮಿಸಿದರು.
ಸ್ಟಾರ್ ಬ್ಯಾಟರ್ ಜೋ ರೂಟ್ ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.

ಹೈದರಾಬಾದ್‌ನಲ್ಲಿ ಮೈದಾನಕ್ಕೆ ಕಾಲಿಟ್ಟಾಗ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲು ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಅವರಿಗೆ ಕೇವಲ 10 ರನ್‌ಗಳ ಅಗತ್ಯವಿತ್ತು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನ 21ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಅವರ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಜೋ ರೂಟ್ ನೂತನ ದಾಖಲೆ ಸ್ಥಾಪಿಸಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಅವರು ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ 60 ಎಸೆತಗಳಲ್ಲಿ 29 ರನ್ ಗಳಿಸಿದರು.
ಜೋ ರೂಟ್ - 2554
ಸಚಿನ್ ತೆಂಡೂಲ್ಕರ್ - 2535
ಸುನಿಲ್ ಗವಾಸ್ಕರ್ - 2348
ಅಲಸ್ಟೇರ್ ಕುಕ್ - 2431
ವಿರಾಟ್ ಕೊಹ್ಲಿ - 1991

ಈ ಸರಣಿಯ ಆರಂಭಕ್ಕೂ ಮುನ್ನ ಜೋ ರೂಟ್ ಭಾರತ ತಂಡದ ವಿರುದ್ಧ 25 ಟೆಸ್ಟ್ ಪಂದ್ಯಗಳಲ್ಲಿ 63.15ರ ಪ್ರಭಾವಶಾಲಿ ಸರಾಸರಿಯಲ್ಲಿ 2,526 ರನ್ ಗಳಿಸಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಭಾರತ ವಿರುದ್ಧ ಈ ಗಮನಾರ್ಹ ಪ್ರದರ್ಶನದಲ್ಲಿ 9 ಶತಕಗಳು ಮತ್ತು 10 ಅರ್ಧ ಶತಕಗಳು ಒಳಗೊಂಡಿವೆ. 2021ರ ಪ್ರವಾಸದ ಸಮಯದಲ್ಲಿ ಚೆನ್ನೈನಲ್ಲಿ ಸ್ಮರಣೀಯ 218 ರನ್ ಸೇರಿದಂತೆ ದೊಡ್ಡ ಸ್ಕೋರ್‌ಗಳ ಇನ್ನಿಂಗ್ಸ್ ಗುರುತಿಸಲ್ಪಟ್ಟಿವೆ. ಅವರ ಹಿಂದಿನ ಪ್ರವಾಸಗಳಲ್ಲಿ ಭಾರತೀಯ ಪರಿಸ್ಥಿತಿಗಳಲ್ಲಿನ ಅವರ ಸಾಮರ್ಥ್ಯವು ಅತ್ಯುತ್ತಮವಾಗಿದೆ.
ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯಲ್ಪಡುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಈ ಹಿಂದೆ ಇಂಗ್ಲೆಂಡ್ ವಿರುದ್ಧ 32 ಪಂದ್ಯಗಳಲ್ಲಿ 51.73ರ ಸರಾಸರಿಯಲ್ಲಿ 2,535 ರನ್ ಗಳಿಸಿ ದಾಖಲೆ ಹೊಂದಿದ್ದರು. ಸಚಿನ್ ತೆಂಡೂಲ್ಕರ್ ಅವರ ಗಮನಾರ್ಹ ದಾಖಲೆಯಲ್ಲಿ ಏಳು ಶತಕಗಳು ಮತ್ತು 13 ಅರ್ಧ ಶತಕಗಳನ್ನು ಒಳಗೊಂಡಿದೆ.
ಹಾಲಿ ಕ್ರಿಕೆಟಿಗ ಜೋ ರೂಟ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಇತಿಹಾಸದಲ್ಲಿ 4000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ತಂಡದ ಮಾಜಿ ನಾಯಕ ಇದೀಗ 48 ಟೆಸ್ಟ್‌ಗಳಿಂದ 4005 ರನ್ ಗಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತ ತಂಡದ ವಿರುದ್ಧ ರಿಕಿ ಪಾಂಟಿಂಗ್ ಅವರ 29 ಟೆಸ್ಟ್‌ಗಳಲ್ಲಿ 2555 ರನ್‌ಗಳ ದಾಖಲೆಯನ್ನು ಹಿಂದಿಕ್ಕುವ ಗುರಿಯನ್ನು ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಹೊಂದಿದ್ದು, ಭಾರತೀಯ ತಂಡದ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸುವ ಗುರಿಯನ್ನು ಹೊಂದಿದ್ದಾರೆ.
ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು. ಆರಂಭದಲ್ಲಿ ಅವರ ನಿರ್ಧಾರ ಉತ್ತಮವಾಗಿದ್ದರೂ, ಆಟ ಮುಂದುವರೆದಂತೆ ಭಾರತೀಯ ಸ್ಪಿನ್ನರ್‌ಗಳು ಅವರ ನಿರ್ಧಾರವನ್ನು ತಲೆಕೆಳಗಾಗುವಂತೆ ಮಾಡಿದರು.
ಇಂಗ್ಲೆಂಡ್ ಮೊದಲ ದಿನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಸರ್ವಪತನ ಕಂಡಿತು. ನಾಯಕ ಬೆನ್ ಸ್ಟೋಕ್ಸ್ 70 ರನ್ ಗಳಿಸಿ ತಮ್ಮ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇನ್ನು ಇದಕ್ಕೆ ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ 23 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಕಲೆಹಾಕಿದ್ದು, ಮುನ್ನಡೆ ಸಾಧಿಸಲು ಇನ್ನು 127 ರನ್ ಗಳಿಸಬೇಕಿದೆ.