'ಗಂಗೂಲಿಯನ್ನು ನಾಯಕತ್ವದಿಂದ ಕಿತ್ತೊಗೆಯಲು ಬುಕಾನನ್ ಬಯಸಿದ್ದರು!'

ಮುಂಬೈ: ಕ್ರಿಕೆಟ್ ಜಗತ್ತಿನಲ್ಲಿ ಟೀಮ್ ಇಂಡಿಯಾ ಶಕ್ತಿಯಾಲಿ ತಂಡವಾಗಿ ಹೊರಹೊಮ್ಮಲು ಕಾರಣರಾದವರು-ಬದಲಾವಣೆಗಳನ್ನು ತಂದವರು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ. ಈಗ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ ಅಧ್ಯಕ್ಷರಾಗಿರುವ ಗಂಗೂಲಿ ಈ ಮೊದಲು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡಿದ್ದರು. ಗಂಗೂಲಿ ನಾಯಕರಾಗಿದ್ದಾಗ ಕೆಕೆಆರ್ ತಂಡಕ್ಕೆ ಜಾನ್ ಬುಕಾನನ್ ತರಬೇತುದಾರರಾಗಿದ್ದರು.
ಐಪಿಎಲ್ ಆರಂಭಗೊಂಡಾಗ ಅಂದರೆ 2008ರಲ್ಲಿ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಕೂಡ ಕೆಕೆಆರ್ ತಂಡದಲ್ಲಿದ್ದರು. ತಾನು ಕೆಕೆಆರ್ ತಂಡದಲ್ಲಿದ್ದಾಗಿನ ಕ್ಷಣ ನೆನಪಿಸಿಕೊಂಡಿರುವ ಚೋಪ್ರಾ, ಕೋಚ್ ಜಾನ್ ಬುಕಾನನ್ ಮತ್ತು ಗಂಗೂಲಿ ಮಧ್ಯೆ ಉತ್ತಮ ಸಂಬಂಧವಿರಲಿಲ್ಲ ಎಂದು ಹೇಳಿದ್ದಾರೆ.
ಜಾನ್ ಬುಕಾನನ್ ಮತ್ತು ದಾದಾ ನಡುವಿನ ವೈಮನಸ್ಸಿನ ಬಗ್ಗೆ ಆಕಾಶ್ ಚೋಪ್ರಾ ಕುತೂಹಲಕಾರಿ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಆಗ ಗಂಗೂಲಿ ನಾಯಕಾಗಿದ್ದರು
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರಾ, 'ಐಪಿಎಲ್ ಆರಂಭಗೊಂಡ ವರ್ಷದಲ್ಲಿ ಕೆಕೆಆರ್‌ನಲ್ಲಿ ಜಾನ್ ಬುಕಾನನ್ (ಕೋಚ್ ಆಗಿ) ಮತ್ತು ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ ಆಟಗಾರ) ಇಬ್ಬರೂ ಇದ್ದರು. ಆಗ ಸೌರವ್ ಗಂಗೂಲಿ ತಂಡದ ನಾಯಕರಾಗಿದ್ದರು. ನಾನು ತಂಡದಲ್ಲಿದ್ದು ಹತ್ತಿರದಲ್ಲಿ ನೋಡಿರುವ ಪ್ರಕಾರ ಆರಂಭದಲ್ಲಿ ಬುಕಾನನ್ ಮತ್ತು ಗಂಗೂಲಿ ನಡುವಿನ ಸಂಬಂಧ ಚೆನ್ನಾಗೇ ಇತ್ತು. ಆದರೆ ಸಮಯ ಹೋದಂತೆ ಇಬ್ಬರ ನಡುವಿನ ಸಂಬಂಧ ಹಾಳಾಯಿತು,' ಎಂದಿದ್ದಾರೆ.

ಯಾರೀ ಜಾನ್ ಬುಕಾನನ್?
ಕೆಕೆಆರ್ ತಂಡಕ್ಕೆ ಕೋಚ್ ಆಗಿದ್ದ ಜಾನ್ ಬುಕಾನನ್, 2003ರಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆದ್ದಾಗ ಆ ತಂಡಕ್ಕೆ ಕೋಚ್ ಆಗಿದ್ದವರು. ಈ ಬುಕಾನನ್ 2009ರಲ್ಲಿ ಕೆಕೆಆರ್ ತಂಡಕ್ಕೆ ಮಲ್ಟಿಪಲ್ ಕ್ಯಾಪ್ಟನ್ (ಬಹು ನಾಯಕ) ಸಿದ್ದಾಂತ ಮುಂದಿಟ್ಟರಂತೆ. ಆದರೆ ಈ ಪ್ರಸ್ತಾವನೆ ಗಂಗೂಲಿಗೆ ಸರಿ ಕಂಡಿರಲಿಲ್ಲ. ಗಂಗೂಲಿ ಒಪ್ಪಿರಲಿಲ್ಲ ಎಂದು ಚೋಪ್ರಾ ಹೇಳಿದ್ದಾರೆ.

ಗಂಗೂಲಿಗೆ ನಾಯಕತ್ವದಿಂದ ಕೊಕ್
ಮಾತು ಮುಂದುವರೆಸಿದ ಚೋಪ್ರಾ, 'ಬುಕಾನನ್ ಕೆಲಸದ ರೀತಿಯೇ ಭಿನ್ನವಾಗಿತ್ತು. ಇತ್ತ ಸೌರವ್ ಗಂಗೂಲಿ ಕೂಡ ವಿಭಿನ್ನ ಮನೋಧರ್ಮದವರು. ಹೀಗಾಗಿ ತನ್ನ ಪ್ರಸ್ತಾವನೆಗೆ ಗಂಗೂಲಿ ಒಪ್ಪದಿದ್ದಾಗ, ಗಂಗೂಲಿಯನ್ನು ನಾಯಕತ್ವದಿಂದ ತೆಗೆದುಹಾಕಲು ಬುಕಾನನ್ ಬಯಸಿದ್ದರು. ಅದರಲ್ಲಿ ಯಶಸ್ವಿಯೂ ಆದರು,' ಎಂದರು.

ಅಂಕಪಟ್ಟಿಯಿಂದ ಕೆಳಗಿಳಿದ ಕೆಕೆಆರ್
ಗಂಗೂಲಿ ಜೊತೆಗಿನ ವೈಮನಸ್ಸಿನಿಂದಾಗಿ ಬುಕಾನನ್ ಅವರು ಗಂಗೂಲಿಯನ್ನು ನಾಯಕತ್ವದದಿಂದ ಕೆಳಗಿಳಿಸಿದರು. 2009ರಲ್ಲಿ ಕೆಕೆಆರ್ ನಾಯಕರಾಗಿ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಆಯ್ಕೆಯಾದರು. ಇದು ಐಪಿಎಲ್ ಅಂಕಪಟ್ಟಿಯಲ್ಲಿ ಕೆಕೆಆರ್‌ಗೆ ಪರಿಣಾಮ ಬೀರಿತು. ಗಂಗೂಲಿ ಇದ್ದಾಗ 6 ಸ್ಥಾನದಲ್ಲಿದ್ದ ಕೆಕೆಆರ್, ಗಂಗೂಲಿ ನಾಯಕತ್ವದಿಂದ ಕೆಳಗಿಳಿದಾಗ 8ನೇ ಸ್ಥಾನಕ್ಕೆ ಕುಸಿದಿತ್ತು ಎಂದು ಆಕಾಶ್ ಚೋಪ್ರಾ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications