
ಲಂಡನ್, ಜೂನ್ 24: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅದ್ಭುತ ಫಿನಿಶರ್ ಎಂದೇ ಖ್ಯಾತರಾದವರು. ಆದರೆ, ಇತ್ತೀಚಿನ ದಿನಗಳಲ್ಲಿ ಧೋನಿ ತಮ್ಮ ಹಳೆಯ ಸಾಮರ್ಥ್ಯ ಕಳೆದುಕೊಂಡಂತೆ ಕಾಣಿಸುತ್ತಿದೆ. ಅವರ ಆಟದಲ್ಲಿ ಹಿಂದಿನ ಮೊನಚು ಕಾಣಿಸುತ್ತಿಲ್ಲ. ಇನ್ನು ಪಂದ್ಯವನ್ನು ತಮ್ಮ 'ಸ್ಟೈಲ್'ನಂತೆ ಫಿನಿಶ್ ಮಾಡುವ ಶಕ್ತಿಯೂ ಅವರಲ್ಲಿ ಹಿಂದಿನಂತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈಗ ಅವರಂತೆ ಆಡುತ್ತಿರುವ ಆಟಗಾರರನ್ನು ಧೋನಿ ಅವರಿಗೆ ಹೋಲಿಸುವ ಪರಿಪಾಠ ಆರಂಭವಾಗಿದೆ. ಆಸ್ಟ್ರೇಲಿಯಾದ ಮಾಜಿ ಎಡಗೈ ಬ್ಯಾಟ್ಸ್‌ಮನ್, ಹಾಲಿ ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಇಂಗ್ಲೆಂಡ್‌ನ ಸಿಡಿಲಬ್ಬರದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರಲ್ಲಿ ಧೋನಿ ಕಾಣಿಸಿದ್ದಾರೆ.
ಜೋಸ್ ಬಟ್ಲರ್ ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದು, ಕ್ರಿಕೆಟ್ ಜಗತ್ತಿನ ಹೊಸ ಧೋನಿ ಎಂದು ಲ್ಯಾಂಗರ್ ಬಣ್ಣಿಸಿದ್ದಾರೆ. ಆದರೆ, ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಾತ್ರ ಅವರು ಶೂನ್ಯಕ್ಕೆ ಔಟ್ ಆಗಬೇಕೆಂದು ಬಯಸಿದ್ದಾರೆ.

'ಜೋಸ್ ಒಬ್ಬ ನಂಬಲಸಾಧ್ಯವಾದ ಆಟಗಾರ. ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವುದನ್ನು ಇಷ್ಟಪಡುತ್ತೇನೆ. ಅವರು ಕ್ರಿಕೆಟ್ ಜಗತ್ತಿನ ಹೊಸ ಧೋನಿ' ಎಂದು ಲ್ಯಾಂಗರ್ ಹೇಳಿದ್ದಾರೆ.
'ಮಂಗಳವಾರ ನಡೆಯುವ ಪಂದ್ಯದಲ್ಲಿ ಖಂಡಿತವಾಗಿಯೂ ಅವರು ಡಕ್ ಔಟ್ ಆಗುತ್ತಾರೆ ಎಂಬ ಭರವಸೆ ಇದೆ. ಆದರೆ, ನಾನು ಅವರನ್ನು ಸಮರ್‌ಸೆಟ್‌ನಲ್ಲಿ ನೋಡಿದ್ದೆ. ಅವರ ಅಮೋಘ ಅಥ್ಲೀಟ್ ಮತ್ತು ನಂಬಲಸಾಧ್ಯವಾದ ಫಿನಿಶರ್' ಎಂದು ಶ್ಲಾಘಿಸಿದ್ದಾರೆ.
'ಇಂಗ್ಲೆಂಡ್ ಬಹಳ ಬಲವಾದ ಬ್ಯಾಟಿಂಗ್ ವಿಭಾಗ ಹೊಂದಿದೆ. ಅದಕ್ಕೆ ಅನುಗುಣವಾಗಿ ನಾವು ಸರಿಯಾಗಿ ಆಡಬೇಕಿದೆ' ಎಂದು ಹೇಳಿದ್ದಾರೆ.
ಶ್ರೀಲಂಕಾದ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದರೂ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಅತ್ಯಂತ ಕಠಿಣವಾದ ತಂಡ ಎಂದಿದ್ದಾರೆ. 'ಮಂಗಳವಾರಕ್ಕಾಗಿ ನನಗೆ ಕಾಯಲು ಆಗುತ್ತಿಲ್ಲ. ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ವಿಶ್ವಕಪ್. ನಾವು ಇದರ ಕುರಿತೇ ಆಲೋಚಿಸುತ್ತಿದ್ದೆವು' ಎಂದು ಹೇಳಿದ್ದಾರೆ.