ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ಬುಧವಾರದಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈಗಾಗಲೇ ಉಭಯ ತಂಡಗಳು ಈ ಮೈದಾನ ಪ್ರವೇಶಿಸಿದ್ದು ಅಭ್ಯಾಸ ಆರಂಭಿಸಿವೆ. ಭಾರತದ ಸ್ಟಾರ್ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಈ ವೇಳೆ ಸ್ಟಾರ್ ಆಟಗಾರರು ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ನಾಯಕ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಳ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಅದೇ ರೀತಿ ಅರ್ಷದೀಪ್ ಸಿಂಗ್ ಸಹ ವಿಶೇಷ ದಾಖಲೆಯನ್ನು ಬರೆಯುವ ರಣ ತಂತ್ರವನ್ನು ರೂಪಿಸಿಕೊಂಡಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಆಟಗಾರರು ಸಹ ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಸಹ ಈ ಸರಣಿಯಲ್ಲಿ ಒಂದು ದಾಖಲೆಯನ್ನು ಬರೆಯಲಿದ್ದಾರೆ. ಬಟ್ಲರ್ ಅವರು ಸಾಕಷ್ಟು ಐಪಿಎಲ್ ಪಂದ್ಯಗಳನ್ನು ಆಡಿದ್ದರಿಂದ ಅವರಿಗೆ ಭಾರತದ ಪಿಚ್‌ಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಇವರು ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವುದು ಆ ತಂಡಕ್ಕೆ ಪ್ಲಸ್ ಆಗಲಿದೆ. ಇನ್ನು ತಂಡದ ನಾಯಕರಾದ ಬಳಿಕ ಇವರ ಫಾರ್ಮ್ ಅಮೋಘವಾಗಿದೆ.
ಜೋಸ್ ಬಟ್ಲರ್ ಟಿ20 ಫಾರ್ಮೆಟ್‌ಗೆ ಹೊಂದುವ ಪ್ಲೇಯರ್. ಇವರು ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ 429 ಪಂದ್ಯಗಳಲ್ಲಿ ಒಟ್ಟು 11967 ರನ್ ಬಾರಿಸಿದ್ದಾರೆ. ಇದರಲ್ಲಿ 8 ಶತಕ, 83 ಅರ್ಧಶತಕಗಳು ಸೇರಿವೆ. ಭಾರತದ ವಿರುದ್ಧ ಸರಣಿಯಲ್ಲಿ ಇವರು 33 ರನ್ ಸಿಡಿಸಿದರೆ 12 ಸಾವಿರ ರನ್ ಪೂರ್ಣಗೊಳಿಸಲಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ 12 ಸಾವಿರ ರನ್ ಗಳಿಸಿದ ವಿಶ್ವದ ಏಳನೇ ಆಟಗಾರರ ಎಂಬ ಹಿರಿಮೆ ಇವರದ್ದಾಗಲಿದೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.
ಗೇಲ್ 463 ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಒಟ್ಟು 14562 ರನ್ ಗಳಿಸಿದ್ದಾರೆ, ಇದರಲ್ಲಿ 22 ಶತಕಗಳು ಸೇರಿವೆ. ಅವರನ್ನು ಹೊರತುಪಡಿಸಿ, ಟಿ20 ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಇವರ ಸಮೀದಲ್ಲೂ ಇಲ್ಲ

ಕ್ರಿಸ್ ಗೇಲ್, 14562 ರನ್
ಶೋಯೆಬ್ ಮಲಿಕ್, 13492 ರನ್
ಕೀರನ್ ಪೊಲಾರ್ಡ್, 13429 ರನ್
ಅಲೆಕ್ಸ್ ಹೇಲ್ಸ್, 13361 ರನ್
ವಿರಾಟ್ ಕೊಹ್ಲಿ, 12886 ರನ್
ಡೇವಿಡ್ ವಾರ್ನರ್, 12757 ರನ್
ಜೋಸ್ ಬಟ್ಲರ್, 11967 ರನ್
ಇದೇ ಸರಣಿಯಲ್ಲಿ ಜೋಸ್ ಬಟ್ಲರ್‌ಗೆ ಮತ್ತೊಂದು ದಾಖಲೆಯನ್ನು ಬರೆಯುವ ಅವಕಾಶ ಸಹ ಇದೆ. ಇವರು ಈ ಸರಣಿಯಲ್ಲಿ ಇನ್ನು ಐದು ಸಿಕ್ಸರ್ ಬಾರಿಸಿದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಲಿದೆ.