ಐಪಿಎಲ್ 2025 ರ 14 ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಅನುಭವಿಸಿತು. ಈ ಸೀಸನ್‌ನಲ್ಲಿ ಆರ್‌ಸಿಬಿ ತಂಡವು ತನ್ನ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೋತಿದೆ. ಗುಜರಾತ್ ತಂಡದ ಗೆಲುವಿನ ಹೀರೋ ಮೊಹಮ್ಮದ್ ಸಿರಾಜ್. ಆದರೆ ಬ್ಯಾಟಿಂಗ್‌ನಲ್ಲಿ ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಸಂಚಲನ ಮೂಡಿಸಿದರು.
ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಜೋಡಿ ಆರ್‌ಸಿಬಿ ತವರಿನಲ್ಲಿ ಸೋಲು ಕಾಣಲು ಪ್ರಮುಖ ಪಾತ್ರವಹಿಸಿದರು. ಇಬ್ಬರ ನಡುವೆ ಮೂಡಿ ಬಂದ ಅದ್ಭುತ ಜೊತೆಯಾಟ ಆರ್‌ಸಿಬಿ ತಂಡದಿಂದ ಹ್ಯಾಟ್ರಿಕ್ ಗೆಲುವನ್ನು ದೂರ ಮಾಡಿತು.

ಸಾಯಿ ಸುದರ್ಶನ್ (49) ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕದ ಹೊಸ್ತಿಲಲ್ಲಿ ಔಟಾದರೆ, ಜೋಸ್ ಬಟ್ಲರ್ ಭರ್ಜರಿ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿದರು. ಆರಂಭದಿಂದಲ್ಲೇ ಬಿರುಸಿನ ಬ್ಯಾಟಿಂಗ್ ಮಾಡಿದ ಬಟ್ಲರ್ ಆರ್‌ಸಿಬಿ ಬೌಲರ್‍ಗಳಿಗೆ ಬೆವರಿಳಿಸಿದರು. ಮೈದಾನದ ಸುತ್ತಲ್ಲೂ ಬೌಂಡರಿ, ಸಿಕ್ಸರ್ ಬಾರಿಸಿದರು. ಇದು ಆರ್‍ಸಿಬಿ ಬೌಲರ್‍ಗಳ ಮೇಲೆ ಒತ್ತಡ ಹೆಚ್ಚಿಸಿತು.
ಆರ್‌ಸಿಬಿ ನೀಡಿದ 170 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 17.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಇದಕ್ಕೆ ಪ್ರಮುಖ ಕಾರಣ ಜೋಸ್ ಬಟ್ಲರ್ ಅವರ ಬ್ಯಾಟಿಂಗ್ ಪ್ರದರ್ಶನ. ಜೋಸ್ ಬಟ್ಲರ್ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಬಾರಿಸಿದರು. ಬಟ್ಲರ್ ತಮ್ಮ ವಿಕೆಟ್ ನೀಡದೆ ಗುಜರಾತ್ ತಂಡಕ್ಕೆ ನೆರವಾದರು.
ಮತ್ತೊಂದೆಡೆ ಸಾಯಿ ಸುದರ್ಶನ್ 36 ಎಸೆತಗಳಲ್ಲಿ 49 ರನ್ ಗಳಿಗೆ ಔಟಾದರು. ಶೆರ್ಫೇನ್ ರುದರ್ಫೋರ್ಡ್ 30 ರನ್ ಗಳಿಸಿ ಅಜೇಯರಾಗಿ ಉಳಿದರು. ನಾಯಕ ಶುಭಮನ್ ಗಿಲ್ 1 ರನ್ ಗಳಿಸಿ ಔಟಾದರು. ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್ ಆರ್‍ಸಿಬಿ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲಿ ಆಹ್ವಾನಿಸಿದರು. ಆರ್‌ಸಿಬಿ ಆರಂಭಿಕ ಆಘಾತದ ನಡುವೆ ಕೂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 169 ರನ್ ಗಳಿಸಿತು. ಆರ್‌ಸಿಬಿ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಅತಿ ಹೆಚ್ಚು 54 ರನ್ ಗಳಿಸಿದರು. ಜಿತೇಶ್ ಶರ್ಮಾ 33 ಮತ್ತು ಟಿಮ್ ಡೇವಿಡ್ 32 ರನ್ ಗಳಿಸಿದರು. ಗುಜರಾತ್ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿದರೆ, ಆರ್ ಸಾಯಿ ಕಿಶೋರ್ 2 ವಿಕೆಟ್ ಪಡೆದರು. ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ ಮತ್ತು ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದರು.