ವಿಶ್ವಕಪ್ ಟೂರ್ನಿಯಲ್ಲಿ ಆ ಒಂದು ಸಂದರ್ಭ ತೀರಾ ಭೀತಿಗೊಳಗಾಗಿದ್ದೆ: ಬಟ್ಲರ್

ಲಂಡನ್, ಜುಲೈ 22: ಜುಲೈ 14ರ ಭಾನುವಾರ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂ ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ವಿಶ್ವಕಪ್ ರೋಚಕ ಫೈನಲ್ ಹಣಾಹಣಿಗೆ ಸಾಕ್ಷಿಯಾಗಿತ್ತು. ಈ ಪಂದ್ಯ ಸಮಬಲಗೊಂಡಿತ್ತಾದರೂ ಅಂತಿಮವಾಗಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಟೂರ್ನಿಯಲ್ಲಿ ಒಂದು ಸಂದರ್ಭ ತಾನು ತೀರಾ ಭೀತಿಗೊಳಗಾಗಿದ್ದೆ ಎಂದು ಇಂಗ್ಲೆಂಡ್‌ನ ಜೋಸ್ ಬಟ್ಲರ್ ಹೇಳಿಕೊಂಡಿದ್ದಾರೆ.
50 ಓವರ್‌ಗಳ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳೂ 241 ರನ್‌ನಿಂದ ಸಮಬಲ ಸಾಧಿಸಿದ್ದವು. ಮತ್ತೆ ನಡೆದ ಸೂಪರ್ ಓವರ್ ಕೂಡ 15 ರನ್‌ನಿಂದ ಟೈ ಎನಿಸಿತೇ ಹೊರತು ಫಲಿತಾಂಶ ತರಲಿಲ್ಲ. ಆದರೆ ಬೌಂಡರಿ ಸಂಖ್ಯೆಗಳ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿಯಾಗಿ ಘೋಷಿಸಲಾಗಿತ್ತು.
ವಿವಾದಾತ್ಮಕ ರೀತಿಯಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿ ಸಂಭ್ರಮಿಸಿತಾದರೂ, ಫೈನಲ್‌ನಲ್ಲಿ ಇಯಾನ್ ಮಾರ್ಗನ್ ಪಡೆ ಟ್ರೋಫಿ ಕೈ ತಪ್ಪಿಸಿಕೊಳ್ಳಲು ನೆಪವಾಗುವಂತಹ ಅನೇಕ ಸಂದರ್ಭಗಳಿತ್ತಾದರೂ ಅವೆಲ್ಲವನ್ನೂ ಇಂಗ್ಲೆಂಡ್ ಮೀರಿ ನಿಂತಿತ್ತು. ಇದು ತಂಡದ ವಿಕೆಟ್ ಕೀಪರ್ ಬಟ್ಲರ್‌ಗೆ ವಿಪರೀತ ಭಯ ಹುಟ್ಟಿಸಿತ್ತಂತೆ. ಇದನ್ನು ಸ್ವತಃ ಬ್ಲಟರ್ ಅವರೇ ಹೇಳಿಕೊಂಡಿದ್ದಾರೆ.
ಫೈನಲ್‌ನಲ್ಲಿ ಅದ್ಭುತ ಆಟವಾಡಿಯೂ ಟ್ರೋಫಿ ಗೆಲ್ಲಲು ಕಿವೀಸ್‌ಗೆ ಸಾಧ್ಯವಾಗದ್ದಕ್ಕೆ ಪ್ರತಿಕ್ರಿಯಿಸಿರುವ ಬಟ್ಲರ್, 'ನ್ಯೂಜಿಲೆಂಡ್‌ಗೆ ಹೀಗಾಗಿದ್ದಕ್ಕೆ ನಾನು ವಿಷಾದಿಸುತ್ತೇನೆ. ಇದೇ ವೇಳೆ ನಾವು ಇಂಥ ಬೇಸರದ ಸಂದರ್ಭಕ್ಕೆ ಒಳಗಾಗದ್ದಕ್ಕೆ ಖುಷಿ ಪಡುತ್ತೇನೆ. ನಾವು ಗೆಲ್ಲಬೇಕು ಅನ್ನೋದು ನಮ್ಮ ಹಣೆಯಲ್ಲಿ ಬರೆದಿತ್ತು. ಟ್ರೋಫಿ ಗೆಲ್ಲೋದು ನಮ್ಮ ಗುರಿಯೂ ಆಗಿತ್ತು,' ಎಂದಿದ್ದಾರೆ.
'ನಾನು ಮೋಯೀನ್ ಅಲಿ ಜೊತೆ ಮಾತನಾಡುವಾಗ ಆತ ಹೇಳಿದ್ದ, ಭಾರತದ ವಿರುದ್ಧ ಗೆಲ್ಲದಿದ್ದರೆ ನಾವು ಗೆಲ್ಲಲು ಬಹಳ ಪರದಾಡಬೇಕಾಗಬಹುದು ಅಂತ' ಎಂದು ಬಟ್ಲರ್ ಟೂರ್ನಿ ವೇಳೆಯ ಕ್ಷಣ ಸ್ಮರಿಸಿಕೊಂಡರು. ಲೀಗ್ ಹಂತದಲ್ಲಿ ಇಂಗ್ಲೆಂಡ್, ಕ್ರಮವಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಗುರುತಿಸಿಕೊಂಡಿತ್ತು. ಅದರಲ್ಲೂ ಭಾರತದ ವಿರುದ್ಧ ಗೆದ್ದಿದ್ದು ಇಂಗ್ಲೆಂಡ್‌ನ ಸಮಿಫೈನಲ್ ಆಸೆಯನ್ನು ರಕ್ಷಿಸಿತ್ತು. ಆ ಪಂದ್ಯ ಸೋತಿದ್ದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶದ ಹಾದಿಯೇ ಮುಚ್ಚುವುದರಲ್ಲಿತ್ತು.
'ಫೈನಲ್‌ಗೆ ಬಂದು, ಅಲ್ಲಿ ನಾವೊಂದು ವೇಳೆ ಸೋತಿದ್ದರೆ ಎಂಬ ವಿಚಾರ ನನಗೆ ತುಂಬಾ ಭಯ ಹುಟ್ಟಿಸಿತ್ತು. ಲಾರ್ಡ್ಸ್‌ನಲ್ಲಿ ಫೈನಲ್ ಅವಕಾಶ ಬದುಕಿನಲ್ಲಿ ಒಂದೇ ಸಾರಿ ಬರುತ್ತದೆ. ಒಂದು ವೇಳೆ ಇದು ನಡೆದು ಹೋಗದಿದ್ದರೆ ಎಂದು ಭೀತಿಯುಟ್ಟಿತ್ತು,' ಎಂದು ಡೈಲಿ ಮೇಲ್ ಜೊತೆ ಮಾತನಾಡುತ್ತ ಜೋಸ್ ಬಟ್ಲರ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications