
ಲಂಡನ್, ಏಪ್ರಿಲ್ 8: ಐಸಿಸಿ ವಿಶ್ವಕಪ್ 2019ರ ಫೈನಲ್‌ನಲ್ಲಿ ಪಾಲ್ಗೊಳ್ಳುವಾಗ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟು ಇಂಗ್ಲೆಂಡ್ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಭಾರೀ ಹಣ ಸಂಗ್ರಹಿಸಿದ್ದಾರೆ. ಬಟ್ಲರ್ ಶರ್ಟ್ $80,000 (60,72,000 ರೂ.)ಕ್ಕೂ ಅಧಿಕ ಹಣ ಸಂಗ್ರಹಿಸಿದೆ. ಶರ್ಟ್ ಹರಾಜಿನಲ್ಲಿ ಬಂದ ಹಣವನ್ನು ಬಟ್ಲರ್, ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡಲಿದ್ದಾರೆ.
ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯ ಸೂಪರ್ ಓವರ್‌ನತ್ತ ತಿರುಗಿತ್ತು. ಸೂಪರ್ ಓವರ್‌ನಲ್ಲೂ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆಗ ಬೌಂಡರಿ ಕೌಂಟ್ ಆಧಾರದಲ್ಲಿ ಇಂಗ್ಲೆಂಡ್ ಅನ್ನು ವಿಜಯಿ ಎಂದು ಘೋಷಿಸಲಾಗಿತ್ತು.
ಫೈನಲ್ ಪಂದ್ಯದ ಅಂತಿಮ ಬಾಲ್‌ನಲ್ಲಿ ಜೋಸ್ ಬಟ್ಲರ್ ಎದುರಾಳಿ ತಂಡದ ಬ್ಯಾಟ್ಸ್‌ಮನ್ ಅನ್ನು ರನ್ ಔಟ್ ಮಾಡಿದ್ದರು. ಆಗ ಬಟ್ಲರ್ ಧರಿಸಿದ್ದುದು ಈಗ ದೊಡ್ಡ ಮೊತ್ತಕ್ಕೆ ಹರಾಜಾಗಿರುವ ಇದೇ ಜೆರ್ಸಿಯನ್ನು. ಶರ್ಟ್‌ನಿಂದ ಸಂಗ್ರಹವಾದ ಹಣವನ್ನು ಬಟ್ಲರ್ ಹೃದಯ ಮತ್ತು ಶ್ವಾಸಕೋಶದ ಚಿಕಿತ್ಸೆಗೆ ಹೆಸರಾಗಿರುವ ಲಂಡನ್‌ನ ರಾಯಲ್ ಬ್ರಾಮ್ಟನ್ ಆಸ್ಪತ್ರೆಗೆ ದೇಣಿಗೆ ನೀಡಲಿದ್ದಾರೆ.
ಫೈನಲ್‌ನಲ್ಲಿ ಅರ್ಧ ಶತಕ ಚಚ್ಚಿ ಬಟ್ಲರ್ ಪಂದ್ಯವನ್ನು ಸೂಪರ್‌ನತ್ತ ಕೊಂಡೊಯ್ದಿದ್ದರು. ಆಗ ಧರಿಸಿದ್ದ ಆ ಲಾಂಗ್ ಸ್ಲೀವ್ ಕೀಪಿಂಗ್ ಜೆರ್ಸಿಯನ್ನು ಜೋಸ್, ವಾರಕ್ಕೆ ಹಿಂದೆ ಈಬೇನಲ್ಲಿ ಹರಾಜಿಗಿಟ್ಟಿದ್ದರು. ಬಿಡ್‌ನಲ್ಲಿ ಸುಮಾರು 82 ಮಂದಿ ಟಿಶರ್ಟ್ ಕೊಳ್ಳಲು ಪೈಪೋಟಿ ನಡೆಸಿದ್ದರು. ಮಂಗಳವಾರ (ಏಪ್ರಿಲ್ 7) ಬಿಡ್ ಕೊನೆಗೊಳ್ಳುವಾಗ ಶರ್ಟ್‌ಗೆ 80,000 ಡಾಲರ್‌ಗೂ ಹೆಚ್ಚು ಹಣ ಸಂಗ್ರಹವಾಗಿತ್ತು.