ಐಪಿಎಲ್ 2025 ರ 42 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ರನ್‌ಗಳಿಂದ ಸೋಲಿಸಿ ಆರನೇ ಗೆಲುವು ದಾಖಲಿಸಿತು. ಇದರೊಂದಿಗೆ, ಆರ್‌ಸಿಬಿ ತವರಿನಲ್ಲಿ ತನ್ನ ಸೋಲಿನ ಸರಣಿಗೆ ಅಂತ್ಯ ಹಾಡಿತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡಕ್ಕೆ ಐಪಿಎಲ್ 2025 ರಲ್ಲಿ ದೊರೆತ ಮೊದಲ ಗೆಲುವು ಇದಾಗಿದೆ. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್ ಮೂರನೇ ಬಾರಿಗೆ ಗೆಲುವ ಪಂದ್ಯವನ್ನು ಸೋತಿತು. ಇದು ರಾಜಸ್ಥಾನ ತಂಡದ ಸತತ 5ನೇ ಸೋಲು.
ಡೆತ್ ಓವರ್‌ಗಳಲ್ಲಿ ಬೆಂಗಳೂರು ಪರ ಜೋಶ್ ಹೇಜಲ್‌ವುಡ್ ಅದ್ಭುತ ಬೌಲಿಂಗ್ ಮಾಡಿ ಸತತ ವಿಕೆಟ್‌ಗಳನ್ನು ಪಡೆದು ಮಿಂಚಿದರು. ರಾಜಸ್ಥಾನ ತಂಡದ ಎಲ್ಲಾ ಲೆಕ್ಕಚಾರವನ್ನು ಹೇಜಲ್‌ವುಡ್ ಉಲ್ಟಾ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ 9 ವಿಕೆಟ್ ಕಳೆದುಕೊಂಡು ಕೇವಲ 194 ರನ್‌ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವನ್ನು 200 ರನ್‌ಗಳ ಗಡಿ ದಾಟಿಸುವಲ್ಲಿ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಪ್ರಮುಖ ಪಾತ್ರ ವಹಿಸಿದರು. ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 70 ರನ್ ಗಳಿಸಿದರೆ, ಪಡಿಕ್ಕಲ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿ ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 50 ರನ್ ಗಳಿಸಿದರು. ಕೊನೆಯಲ್ಲಿ, ಟಿಮ್ ಡೇವಿಡ್ 23 ರನ್ ಗಳಿಸಿದರು ಮತ್ತು ಜಿತೇಶ್ ಶರ್ಮಾ 10 ಎಸೆತಗಳಲ್ಲಿ 20 ರನ್ ಗಳಿಸಿದರು. ರಾಜಸ್ಥಾನ ಪರ ಸಂದೀಪ್ ಶರ್ಮಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಜೋಫ್ರಾ ಆರ್ಚರ್ ಮತ್ತು ವನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು.
ಆರ್‌ಸಿಬಿ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ ಪರ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸ್ಪೋಟಕ ಇನ್ನಿಂಗ್ಸ್ ಆಡಿದರು. ಈ ಮೂಲಕ ರಾಜಸ್ಥಾನ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಮಧ್ಯಮ ಕ್ರಮಾಂಕವು ಜೈಸ್ವಾಲ್ ಇನ್ನಿಂಗ್ಸ್ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಯಶಸ್ವಿ 19 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿದರು. ನಿತೀಶ್ ರಾಣಾ (28), ರಿಯಾನ್ ಪರಾಗ್ (22) ಮತ್ತು ಸಿಮ್ರಾನ್ ಹೆಟ್ಮೆಯರ್ (11) ಬಿಗ್ ಸ್ಕೋರ್‌ಗಳನ್ನು ಗಳಿಸುವಲ್ಲಿ ವಿಫಲರಾದರು. 14 ವರ್ಷದ ವೈಭವ್ ಸೂರ್ಯವಂಶಿ 16 ರನ್ ಗಳಿಸಿ ಔಟಾದರು. ಈ ಮೂಲಕ ಮೂರನೇ ಬಾರಿಗೆ ಗೆಲ್ಲುವ ಪಂದ್ಯವನ್ನು ರಾಜಸ್ಥಾನ ಕೈಯಿಂದ ಚೆಲ್ಲಿತ್ತು. ಇದಕ್ಕೆ ಪ್ರಮುಖ ಕಾರಣ ಬೆಂಗಳೂರು ತಂಡದ ಸ್ಟಾರ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್.
ಜೋಶ್ ಹೇಜಲ್‌ವುಡ್ ಅವರು ಬೆಂಗಳೂರು ಪರ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದರು. ಈ ಪ್ರದರ್ಶನ ಮೂಲಕ ತವರಿನಲ್ಲಿ ಆರ್‌ಸಿಬಿ ಗೆಲುವಿನ ನಗೆ ಕಾಣಲು ಕಾರಣವಾದರು. ಆರಂಭದಲ್ಲಿ ಹೇಜಲ್‌ವುಡ್ ಲಯ ಕಂಡುಕೊಂಡರು. ಆದರೆ, ಕೊನೆಯ ಓವರ್‍ಗಳಲ್ಲಿ ಹೀರೋ ಎನಿಸುಕೊಂಡರು.
ಜೋಶ್ ಹೇಜಲ್‌ವುಡ್ ಎಸೆದ ರಾಜಸ್ಥಾನ ತಂಡ ಇನ್ನಿಂಗ್ಸ್‌ನ 19ನೇ ಓವರ್ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಉರಿ ಬೌಲಿಂಗ್ ದಾಳಿ ನಡೆಸಿ ಜೋಶ್ ಹೇಜಲ್‌ವುಡ್ ಗೆಲುವಿನ ನಿರೀಕ್ಷೆಯಲ್ಲಿದ್ದ ರಾಜಸ್ಥಾನ ತಂಡವನ್ನು ಕಟ್ಟಿ ಹಾಕಿದರು. ಹೇಜಲ್‌ವುಡ್ 19ನೇ ಓವರ್‍ನಲ್ಲಿ ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಕಬಳಿಸಿದರು. ಬೆಂಗಳೂರು ತಂಡದಿಂದ ಜಾರಿ ಹೋಗಿದ್ದ ಪಂದ್ಯವನ್ನು ಮರಳಿ ತಂದರು. ತಮ್ಮ ಅಪಾರ ಅನುಭವನ್ನು ಈ ಪಂದ್ಯದಲ್ಲಿ ಬಳಸಿ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಹೇಜಲ್‌ವುಡ್ ಈ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದರು. ಇದರೊಂದಿಗೆ ಐಪಿಎಲ್ ಸೀಸನ್‌ವೊಂದರಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‍ಗೆ ನೀಡುವ ರೇಸ್‌ನಲ್ಲಿ ಜಂಟಿಯಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಸ್ಥಾನ ಪಡೆದಿದ್ದಾರೆ. ಹೇಜಲ್‌ವುಡ್ ಐಪಿಎಲ್ 2025 ರಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿಯೂ ಪ್ರಸಿದ್ಧ್ ಕೃಷ್ಣ 16 ವಿಕೆಟ್ ಕಬಳಿಸಿದ್ದಾರೆ.