
ಕೇಪ್‌ಟೌನ್, ಜನವರಿ 14: ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೀನ್ ಪೌಲ್ ಡುಮಿನಿ (ಜೆಪಿ ಡುಮಿನಿ) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 35ರ ಹರೆಯದ ಆಲ್ ರೌಂಡರ್ ಡುಮಿನಿ ಸುಮಾರು 15 ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಆಡಿದ್ದರು.
46 ಟೆಸ್ಟ್‌ಗಳಲ್ಲಿ 32.85ರ ಸರಾಸರಿಯಂತೆ 2,103 ರನ್, 199 ಏಕದಿನ ಪಂದ್ಯಗಳಲ್ಲಿ 5117 ರನ್ (36.81ರ ಸರಾಸರಿ), ಟಿ20ಐ 81 ಪಂದ್ಯಗಳಲ್ಲಿ 1934 ರನ್ (38.68 ಸರಾಸರಿ), 83 ಐಪಿಎಲ್ ಪಂದ್ಯಗಳಲ್ಲಿ 2029 ರನ್ (39.78 ಸರಾಸರಿ) ರನ್ ದಾಖಲೆ ಜೀನ್ ಪೌಲ್ ಹೊಂದಿದ್ದಾರೆ.
ಬೌಲಿಂಗ್‌ನಲ್ಲೂ ಉತ್ತಮ ಸಾಧನೆ ಹೊಂದಿರುವ ಡುಮಿನಿ, 46 ಟೆಸ್ಟ್ ಪಂದ್ಯಗಳಲ್ಲಿ 42 ವಿಕೆಟ್, 199 ಏಕದಿನ ಪಂದ್ಯಗಳಲ್ಲಿ 69 ವಿಕೆಟ್, 81 ಟಿ20ಐ ಪಂದ್ಯಗಳಲ್ಲಿ 21 ವಿಕೆಟ್, 83 ಐಪಿಎಲ್ ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. ಇಷ್ಟೇ ಅಲ್ಲ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಒಬ್ಬನೇ ಬೌಲರ್ ಜೆಪಿ ಡುಮಿನಿ.
'ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿದ್ದಾಗ ನಮ್ಮ ಉದ್ದೇಶ ದೊಡ್ಡದಿರುತ್ತದೆ. ನಮಗಿಂತ ಕಿರಿಯರು ನಮ್ಮ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿರುತ್ತಾರೆ. ನನ್ನ ಮಹತ್ವಾಕಾಂಕ್ಷೆ ಏನೆಂದರೆ ಕಿರಿಯ ಆಟಗಾರರಿಗೆ ಅವರ ಜವಾಬ್ದಾರಿ ಏನೆಂಬುದನ್ನು ತಿಳಿಸಿಕೊಡುವುದು,' ಎಂದು ನಿವೃತ್ತಿ ಬಳಿಕ ಡುಮಿನಿ ಹೇಳಿದ್ದಾರೆ.