ವಿಶ್ವ ಕ್ರಿಕೆಟ್‌ನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಎಲ್ಲರಿಗಿಂತಲೂ ಭಿನ್ನ ಬೌಲರ್.. ಈ ಬೌಲರ್ ಪಾಕಿಸ್ತಾನ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಅಲ್ಲದೆ ವಿಶ್ವದಲ್ಲೇ ತಮ್ಮದೇ ಛಾಪು ಮೂಡಿಸಿದ ಆಟಗಾರ. ತಮ್ಮ ಸ್ಪಿನ್ ಬೌಲಿಂಗ್ ಮೂಲಕ ವಿಕೆಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಅಗ್ರ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೂ ಸ್ಥಾನ. ಕರ್ನಾಟಕದ ಸ್ಟಾರ್ ಬೌಲರ್ ಅವಿಸ್ಮರಣಿಯ ಬೌಲಿಂಗ್ ದಾಳಿ ನಡೆಸಿ ಇಂದಿಗೆ 21 ವರ್ಷಗಳು ಸಂದಿವೆ.
ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರ ಅದ್ಭುತ ಲೆಗ್ ಸ್ಪಿನ್ ಬಾಲರ್. 7 ಫೆಬ್ರವರಿ 1999 ರಂದು, ಕುಂಬ್ಳೆ ಏಕಾಂಗಿಯಾಗಿ ಪಾಕಿಸ್ತಾನ ವಿರುದ್ಧ ಇವರ ಬೌಲಿಂಗ್ ಧಾಟಿಗೆ ವಿಶ್ವವೇ ಸಲಾಂ ಎಂದಿದೆ. 1999 ರಲ್ಲಿ, ಪಾಕಿಸ್ತಾನ ವಿರುದ್ಧ ದೆಹಲಿ ಟೆಸ್ಟ್ ಪಂದ್ಯದಲ್ಲಿ, ಅನಿಲ್ ಕುಂಬ್ಳೆ ಅವರು ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿ ವಿಶ್ವದಾಖಲೆ ಮಾಡಿದರು. ಆ ಸಮಯದಲ್ಲಿ ಅವರು ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡರು.

1999ರಲ್ಲಿ ಪಾಕಿಸ್ತಾನ ವಿರುದ್ಧ ಆಡಿದ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಚೆನ್ನೈನಲ್ಲಿ 12 ರನ್‌ಗಳ ಅಂತರದ ಸೋಲನ್ನು ಕಂಡಿತ್ತು. ಇದಾದ ಬಳಿಕ ಸರಣಿ ಸಮಬಲಗೊಳಿಸಲು ಭಾರತ ಎರಡನೇ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಆ ಸಮಯದಲ್ಲಿ, ಭಾರತದ ನಾಯಕ ಮೊಹಮ್ಮದ್ ಅಜರುದ್ದೀನ್ ದೆಹಲಿ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್‌ಗಳಿಗೆ ಆಲೌಟ್ ಆಯಿತು. ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ 5 ವಿಕೆಟ್ ಪಡೆದರು. ಇದಾದ ಬಳಿಕ ಪಾಕಿಸ್ತಾನ ತಂಡ ಕೂಡ ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 172 ರನ್ ಗಳಿಗೆ ಕುಸಿತ ಕಂಡಿತು. ಭಾರತ ತಂಡ ಕೂಡ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಸಾಧಿಸಿತು. ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ 339 ರನ್ ಗಳಿಸಿತು ಮತ್ತು ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನಕ್ಕೆ 420 ರನ್‌ಗಳ ದೊಡ್ಡ ಗುರಿಯನ್ನು ನೀಡಿತು.

ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಪಾಕ್ ಆರಂಭಿಕ ಬ್ಯಾಟ್ಸ್‌ಮನ್‌ಗಳು ತಂಡಕ್ಕೆ ಉತ್ತಮ ಆರಂಭ ನೀಡಿ 101 ರನ್‌ಗಳ ಜೊತೆಯಾಟ ನೀಡಿದ್ದರು. ಆದರೆ ಇದಾದ ನಂತರ ಕುಂಬ್ಳೆ ಮೊದಲು ಶಾಹಿದ್ ಅಫ್ರಿದಿ ಮತ್ತು ನಂತರ ಸಯೀದ್ ಅನ್ವರ್ ಅವರ ವಿಕೆಟ್ ಪಡೆಯುವ ಮೂಲಕ ತಮ್ಮ ಸ್ಪಿನ್‌ನ ಮ್ಯಾಜಿಕ್ ತೋರಿಸಿದರು. ಮತ್ತು ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಮುನ್ನುಡಿ ಬರೆದರು.
ಇಲ್ಲಿಂದ ಪಾಕ್ ಬ್ಯಾಟ್ಸ್‌ಮನ್‌ಗಳು ಒಬ್ಬೊಬ್ಬರಾಗಿ ಪೆವಿಲಿಯನ್ ಪೆರೆಡ್ ನಡೆಸಿದರು. ಪಾಕ್ ತಂಡ 207 ರನ್‌ಗಳಿಗೆ ಕುಸಿಯಿತು. ಭಾರತ ತಂಡ 212 ರನ್‌ಗಳಿಂದ ಪಂದ್ಯ ಗೆದ್ದರೆ, ಅನಿಲ್ ಕುಂಬ್ಳೆ 26.3 ಓವರ್‌ಗಳಲ್ಲಿ 74 ರನ್‌ಗಳಿಗೆ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು.

ಅನಿಲ್ ಕುಂಬ್ಳೆ ಆಡಿದ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಪಡೆದಿದ್ದಾರೆ. ಅಲ್ಲದೆ 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಕಬಳಿಸಿ ಅಬ್ಬರಿಸಿದ್ದಾರೆ.