
ದುಬೈ, ಆಗಸ್ಟ್ 20: ಗ್ಯಾಲೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಆಗಸ್ಟ್ 14-18ರ ವರೆಗೆ ನಡೆದಿದ್ದ ಕೇನ್ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಲಂಕಾ ಬೌಲರ್ ಅಖಿಲ ಧನಂಜಯ ಅನುಮಾನಾಸ್ಪದ ಬೌಲಿಂಗ್ ಶೈಲಿ ಪ್ರದರ್ಶಿಸಿದ್ದಾರೆ ಎಂದು ದೂರಲಾಗಿದೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹೇಳಿದೆ.
ಭಾನುವಾರ (ಆಗಸ್ಟ್ 18) ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲ ಗೈ ಆಫ್ ಬ್ರೇಕ್ ಸ್ಪಿನ್ನರ್‌ಗಳಾದ ವಿಲಿಯಮ್ಸನ್ ಮತ್ತು ಧನಂಜಯ ಇಬ್ಬರ ಬೌಲಿಂಗ್ ಶೈಲಿಯೂ ಪರಿಶೀಲನೆಗೆ ಒಳಪಡುವಂತಿತ್ತು ಎಂಬ ದೂರು ಕೇಳಿಬಂದಿದೆ ಎಂದು ಐಸಿಸಿ ಮಂಗಳವಾರ (ಆಗಸ್ಟ್ 20) ತಿಳಿಸಿದೆ.
ಪಂದ್ಯದ ಅಧಿಕಾರಿಗಳು ನೀಡಿರುವ ಆಟಗಾರರ ಬೌಲಿಂಗ್ ಶೈಲಿಯ ಬಗೆಗಿನ ದೂರನ್ನು ಎರಡೂ ತಂಡಗಳ ನಿರ್ವಹಣಾ ಸಮಿತಿಗೆ ನೀಡಲಾಗಿದೆ. ದೂರಿನಲ್ಲಿ ಇಬ್ಬರೂ ಆಟಗಾರರ ಕಾನೂನು ಬದ್ಧ ಬೌಲಿಂಗ್ ಶೈಲಿಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಐಸಿಸಿ ನೀಡಿರುವ ಹೇಳಿಕೆಯಲ್ಲಿ ವಿವರಿಸಿದೆ.
ವಿಲಿಯಮ್ಸನ್ ಮತ್ತು ಧನಂಜಯ, ದೂರು ದಾಖಲಾದ ಆಗಸ್ಟ್ 18ರಿಂದ 14 ದಿನಗಳ ಒಳಗಾಗಿ ಬೌಲಿಂಗ್ ಶೈಲಿ ಪರಿಶೀಲನೆಗೆ ಒಳಗಾಗಬೇಕಿದೆ. ಪರಿಶೀಲನೆಯ ಬಳಿಕ ಇಬ್ಬರ ಬೌಲಿಂಗ್ ಶೈಲಿಯೂ ಅನುಮತಿ ನೀಡಿರುವಂತದ್ದೇ ಎಂದು ಐಸಿಸಿ ಹೇಳುವವರೆಗೂ ಇಬ್ಬರೂ ಬೌಲಿಂಗ್ ಮಾಡಲು ಅನುಮತಿ ನೀಡಲಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 29ರ ಹರೆಯದ ವಿಲಿಯಮ್ಸನ್ ವಿಕೆಟ್ ಪಡೆಯದೆ ಒಟ್ಟು 3 ಓವರ್‌ಗಳನ್ನು ಎಸೆದಿದ್ದರು. 25ರ ಹರೆಯದ ಧನಂಜಯ ಒಟ್ಟು 62 ಓವರ್ ಎಸೆದು 6 ವಿಕೆಟ್ ಪಡೆದಿದ್ದರು. ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್ ಜಯ ಗಳಿಸಿತ್ತು. ಸಂಕ್ಷಿಪ್ತ ಸ್ಕೋರ್: ಕಿವೀಸ್-249-10 (83.2), 285-10 (106), ಲಂಕಾ-267-10 (93.2), 268-4 (86.1).