ಬಹು ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಲಿದೆ. ಈ ಟೂರ್ನಿಯನ್ನು ಈ ಬಾರಿ ಪಾಕಿಸ್ತಾನ ಆಯೋಜಿಸಲಿದ್ದು, ಉದ್ಘಟನಾ ಪಂದ್ಯ ಫೆಬ್ರವರಿ 19 ರಂದು ಕರಾಚಿಯಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕ್ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಇತ್ತೀಚಿಗೆ ಪಾಕ್‌ನಲ್ಲಿ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಟ್ರೋಫಿಗೆ ಮುತ್ತಿಟಿರುವ ಕಿವೀಸ್, ಆತ್ಮವಿಶ್ವಾಸದಿಂದ ಅಂಗಳ ಪ್ರವೇಶಿಸಲಿದೆ.
2017ರ ಬಳಿಕ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಆಗುತ್ತಿದ್ದು ನಿರೀಕ್ಷೆಗಳು ಗರಿಗೆದರಿವೆ. ಈ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಡಲು ಒಟ್ಟು 8 ತಂಡಗಳು ಕಾದಾಟ ನಡೆಸಲಿವೆ. ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಈ ಟೂರ್ನಿಯಲ್ಲಿ ಸ್ಟಾರ್ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ಇದೇ ವೇಳೆ ಕಿವೀಸ್ ತಂಡದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಹಲವು ವರ್ಷಗಳ ಕಾಲ ನ್ಯೂಜಿಲೆಂಡ್ ಬ್ಯಾಟಿಂಗ್‌ಗೆ ಬೆನ್ನೆಲೆಬು ಆಗಿರುವ ಕೇನ್ ವಿಲಿಯಮ್ಸನ್ ಬಿಗ್ ಮ್ಯಾಚ್ ಪ್ಲೇಯರ್. ಸಾಕಷ್ಟು ದಾಖಲೆಗಳಿಗೆ ಇವರು ಈಗಾಗಲೇ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ. ಆದರೆ ನ್ಯೂಜಿಲೆಂಡ್ ಪರ ಇನ್ನೂ ಯಾರು ಮಾಡದ ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿ ಕೇನ್ ಇದ್ದು, ಬುಧವಾರದ ಪಂದ್ಯದಲ್ಲಿ ದಾಖಲೆ ನಿರ್ಮಿಸುವ ವಿಶ್ವಾಸ ಹೊಂದಿದ್ದಾರೆ.
ತಮ್ಮ ನೈಜ ಬ್ಯಾಟಿಂಗ್ ಮೂಲಕವೇ ರನ್‌ಗಳನ್ನು ಗುಡ್ಡೆ ಹಾಕಿರುವ ನ್ಯೂಜಿಲೆಂಡ್ ಮಾಜಿ ನಾಯಕ ಕೇನ್ ವಿಲಿಯಮ್ಸನ್, ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇತ್ತೀಚಿಗೆ ಕೇನ್ ಏಕದಿನ ಕ್ರಿಕೆಟ್‌ನಲ್ಲಿ 7000 ರನ್ ಕಲೆ ಹಾಕಿ ಅಬ್ಬರಿಸಿದ್ದರು. ಈ ಮೂಲಕ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದರು. ಈಗ ಪಾಕ್ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಿದರೆ ಮತ್ತೊಂದು ದಾಖಲೆಗೆ ಭಾಜನರಾಗುತ್ತಾರೆ.

ಫೆಬ್ರವರಿ 19 ರಂದು ಕರಾಚಿಯಲ್ಲಿ ನಡೆಯುವ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅವರು 114 ರನ್ ಗಳಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ 19000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಸದ್ಯ ಕೇನ್ ಅವರ ಬುಟ್ಟಿಯಲ್ಲಿ 18886 ಅಂತಾರಾಷ್ಟ್ರೀಯ ರನ್‌ಗಳಿವೆ.
ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಏಕದಿನ ಕ್ರಿಕೆಟ್‌ನಲ್ಲಿ 168 ಪಂದ್ಯಗಳ 160 ಇನಿಂಗ್ಸ್‌ನಲ್ಲಿ 7035 ರನ್ ಸಿಡಿಸಿದ್ದಾರೆ. ಈ ವೇಳೆ 49.54ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಅಲ್ಲದೆ 14 ಶತಕ ಹಾಗೂ 46 ಅರ್ಧಶತಕಗಳು ಸೇರಿವೆ. ಇನ್ನು ಟೆಸ್ಟ್‌ನಲ್ಲಿ 105 ಪಂದ್ಯ ಆಡಿದ್ದು 54.88ರ ಸರಾಸರಿಯಲ್ಲಿ 9276 ರನ್ ಕಲೆ ಹಾಕಿದ್ದಾರೆ. ಈ ವೇಳೆ 33 ಶತಕ ಹಾಗೂ 37 ಅರ್ಧಶತಕ ಸಿಡಿಸಿದ್ದಾರೆ.