
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರವನ್ನೇ ಅನುಸರಿಸಲಿದ್ದಾರೆ. ಕೇನ್ ವಿಲಿಯಮ್ಸನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಕೇನ್ ವಿಲಿಯಮ್ಸನ್ ತಪ್ಪಿಸಿಕೊಳ್ಳಲಿದ್ದಾರೆ.
ಕೇನ್ ವಿಲಿಯಮ್ಸನ್ ಅವರ ನಿರ್ಧಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ಗ್ಯಾರಿ ಸ್ಟೀಡ್ ಸ್ಪಷ್ಟಪಡಿಸಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಸಂದೇಶದಲ್ಲಿ ಕೋಚ್ ವೆಸ್ಟ್ ಇಂಡೀಸ್ ವಿರುದ್ಧದ ಈ ಬಗ್ಗೆ ಹೇಳಿದ್ದಾರೆ. ಮೊದಲ ಮಗುವಿನ ಜನನದ ಹಿನ್ನೆಲೆಯಲ್ಲಿ ಪತ್ನಿ ಸಾರಾ ರಹೀಮ್ ಜೊತೆಗೆ ಇರಲು ಕೇನ್ ವಿಲಿಯಮ್ಸನ್ ಬಯಸಿದ್ದಾರೆ.
ಇನ್ನು ಸಂದರ್ಭದಲ್ಲಿ ಕಿವೀ್ ಕೋಚ್ ಗ್ಯಾರಿ ಸ್ಟೀಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿದ ವಿಲ್ ಯಂಗ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ ಎಂದು ತಿಳಿಸಿದರು. ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಟಾಮ್ ಲ್ಯಾಥಮ್ ನ್ಯೂಜಿಲೆಂಡ್ ತಂಡವನ್ನು ಎರಡನೇ ಬಾರಿಗೆ ಮುನ್ನಡೆಸಲಿದ್ದಾರೆ.
"ಟಾಮ್ ಲ್ಯಾಥಮ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆಯೂ ಅವರು ಟೆಸ್ಟ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ತಮ್ಮ ಮೇಲಿನ ಜವಾಬ್ಧಾರಿಯನ್ನು ಅವರು ತಾಳ್ಮೆಯಿಂದ ವಹಿಸಿಕೊಳ್ಳಲಿದ್ದಾರೆ. ತಂಡದಲ್ಲಿ ಇನ್ನೂ ಹಲವು ನಾಯಕರಿದ್ದಾರೆ. ಅವರ ಬೆಂಬಲದೊಂದಿಗೆ ಲ್ಯಾಥಮ್ ಉತ್ತಮವಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಗ್ಯಾರಿ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಇದೇ ರೀತಿಯ ನಿರ್ಧಾರವನ್ನು ಈ ಮೊದಲೇ ಮಾಡಿದ್ದರು. ಅಡಿಲೇಡ್‌ನಲ್ಲಿ ಅಹರ್ನಿಶಿಯಾಗಿ ಸಾಗಲಿರುವ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿರುವ ವಿರಾಟ್ ಕೊಹ್ಲಿ ಅದಾದ ಬಳಿಕ ತವರಿಗೆ ವಾಪಾಸಾಗಲಿದ್ದಾರೆ.