
ಟಿ20 ವಿಶ್ವಕಪ್‌ನ ಬಳಿಕ ಟೀಮ್ ಇಂಡಿಯಾ ದ್ವಿಪಕ್ಷೀಯ ಸರಣಿಗೆ ಸಜ್ಜಾಗಿದ್ದು ನ್ಯೂಜಿಲೆಂಡ್ ವಿರುದ್ಧ ಸರಣಿ ನಡೆಯಲಿದೆ. ಈಗಾಗಲೇ ಭಾರತ ತಂಡ ಕಿವೀಸ್‌ಗೆ ಪ್ರಯಾಣಿಸಿದ್ದು ಅಭ್ಯಾಸವನ್ನು ನಡೆಸುತ್ತಿದೆ. ಶುಕ್ರವಾರದಂದು ಈ ಸರಣಿ ಆರಂಭವಾಗಲಿದ್ದು ಟೀಮ್ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಈ ಸರಣಿಗೂ ಮುನ್ನ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸರಣಿಯ ಟ್ರೋಫಿಯನ್ನು ಕೆಳಕ್ಕೆ ಬೀಳದಂತೆ ಹಿಡಿದು ಮುಜುಗರದಿಂದ ತಪ್ಪಿಸಿದ್ದಾರೆ. ಫೋಟೋಗೆ ಫೊಸ್ ಕೊಡುತ್ತಿದ್ದ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಹಾರಿದ ಟ್ರೋಫಿ ಹಿಡಿದುಕೊಂಡ ಕೇನ್ ವಿಲಿಯಮ್ಸನ್ "ನಾನು ಇದನ್ನು ಎತ್ತಿ ಹಿಡಿಯುವೆ" ಎಂದು ತಮಾಷೆಯಾಗಿ ಉದ್ಘರಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಟೀಮ್ ಇಂಡಿಯಾ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಕೂಡ ನಗೆ ಬೀರಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯ ಆಯೋಜನೆಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಫೋಟೋ ಸೆಶನ್ ಆಯೋಜಿಸಲಾಗಿತ್ತು. ಇತ್ತಂಡಗಳ ನಾಯಕರು ಟ್ರೋಫಿಯ ಜೊತೆಗೆ ಫೋಸ್ ಕೊಡುತ್ತಿದ್ದರು. ವೆಲ್ಲಿಂಗ್ಟನ್ ಸಮುದ್ರ ಕಿನಾರೆಯಲ್ಲಿ ನಡೆದ ಈ ಫೋಟೋ ಸೆಶನ್ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿದ ಪರಿಣಾಮವಾಗಿ ಸರಣಿಯ ಟ್ರೋಫಿ ಹಾರಿ ಕೆಳಕ್ಕೆ ಬೀಳುತ್ತಿತ್ತು. ಈ ಸಂದರ್ಭದಲ್ಲಿ ಕೇನ್ ವಿಲಿಯಮ್ಸನ್ ಸಮಯಪ್ರಜ್ಞೆ ತೋರಿ ಆಯೋಜಕರನ್ನು ಮುಜುಗರದಿಂದ ಕಾಪಾಡಿದ್ದಾರೆ.
ಟೀಮ್ ಇಂಡಿಯಾ ನವೆಂಬರ್ 18ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ, ಹಿರಿಯ ಆಟಗಾರ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಸೇರಿದಂತೆ ಹಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಳ್ಳಲಿದ್ದು ರಿಷಭ್ ಪಂತ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ವೆಲ್ಲಿಂಗ್ಟನ್ , ಮೌಂಟ್ ಮೌಂಗುನ್ಯೂ ಹಾಗೂ ನೇಪಿಯರ್‌ನಲ್ಲಿ ಈ ಮೂರು ಪಂದ್ಯಗಳು ನಡೆಯಲಿದ್ದು ಅದಾದ ಬಳಿಕ ಏಕದಿನ ಸರಣಿ ನಡೆಯಲಿದೆ.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿತ್ತು. ಬಳಿಕ ಹಲವು ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾದ ನಾಯಕತ್ವ ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಆಟಗಾರರಿಗೆ ನಾಯಕತ್ವ ವಹಿಸಬೇಕು ಎಂಬ ಕೂಗು ಜೋರಾಗಿದ್ದು ಈ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿದೆ.
ಟೀಮ್ ಇಂಡಿಯಾ ಸ್ಕ್ವಾಡ್: ಹಾರ್ದಿಕ್ ಪಾಂಡ್ಯ (ನಾಯಕ), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.
ನ್ಯೂಜಿಲೆಂಡ್ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಡ್ಯಾರೆಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಫಿನ್ ಅಲೆನ್, ಡೆವೊನ್ ಕಾನ್ವೇ, ಗ್ಲೆನ್ ಫಿಲಿಪ್ಸ್, ಲಾಕಿ ಫರ್ಗುಸನ್, ಆಡಮ್ ಮಿಲ್ನೆ, ಇಶ್ ಸೋಧಿ, ಟಿಮ್ ಸೌಥಿ, ಬ್ಲೇರ್ ಟಿಕ್ನರ್