2019ರ ಏಕದಿನ ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ತಂಡಕ್ಕೆ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಮುನ್ನವೇ ಆಘಾತ ಎದುರಾಗಿದೆ. ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಐಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲೇ ಮೊಣಕಾಲು ಗಾಯಕ್ಕೆ ತುತ್ತಾದ ನಂತರ ಅವರು ಐಪಿಎಲ್‌ನಿಂದಲೇ ಹೊರಬಿದ್ದಿದ್ದರು.
ಗುಜರಾತ್ ಟೈಟಾನ್ಸ್ ತಂಡಕ್ಕೆ ಆಡಿದ ಮೊದಲನೇ ಪಂದ್ಯದಲ್ಲೇ ಗಾಯಗೊಂಡಿದ್ದು, ತಂಡಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಸಿಎಸ್‌ಕೆ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ, ಬೌಂಡರಿ ಗೆರೆಯ ಸಮೀಪ ಬಿದ್ದ ಕಾರಣ ಮೊಣಕಾಲಿಗೆ ಪೆಟ್ಟಾಗಿದೆ. ತೀವ್ರ ನೋವಿನಿಂದ ಬಳಲಿದ ಅವರು ಫಿಸಿಯೋಗಳ ಸಹಾಯದಿಂದ ಮೈದಾನದಿಂದ ಹೊರನಡೆದರು. ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಆಡುವುದು ಅಸಾಧ್ಯ ಎಂದು ತಿಳಿದ ನಂತರ ಇಡೀ ಟೂರ್ನಿಯಿಂದ ಹೊರಬಿದ್ದರು.

ಐಪಿಎಲ್‌ನಿಂದ ಹೊರಬಿದ್ದ ಬಳಿಕ ಕೇನ್ ವಿಲಿಯಮ್ಸನ್ ವಾಪಸ್ ನ್ಯೂಜಿಲೆಂಡ್‌ಗೆ ತೆರಳಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ತಜ್ಞರನ್ನು ಭೇಟಿ ಮಾಡಿದ ಬಳಿಕ, ಅವರು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ತಿಳಿಸಲಾಗಿದೆ. ಮೊಣಕಾಲಿನ ಕ್ರೂಸಿಯೇಟ್ ಲಿಗಮೆಂಟ್ ಛಿದ್ರವಾಗಿದ್ದು, ಅದಕ್ಕೆ ವಿಶೇಷ ಶಸ್ತ್ರಿಚಿಕಿತ್ಸೆಯ ಅಗತ್ಯವಿದೆ ಎಂದು ತಜ್ಞರು ದೃಢಪಡಿಸಿದ್ದಾರೆ. ಮುಂದಿನ ಮೂರು ವಾರಗಳಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ.
ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ದೀರ್ಘಕಾಲದ ವಿಶ್ರಾಂತಿ ಪಡೆಯಬೇಕಾಗಿದ್ದು, ಏಕದಿನ ವಿಶ್ವಕಪ್ ವೇಳೆಗೆ ಫಿಟ್ ಆಗುವುದು ಅಸಾಧ್ಯ ಎನನಲಾಗಿದೆ. ಒಂದು ವೇಳೆ ಅವರು ಈ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಆಡದೇ ಇದ್ದರೆ ಅದು ನಿಜಕ್ಕೂ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ವಿಲಿಯಮ್ಸನ್ ಜಗತ್ತಿನ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರು, ಅವರ ಬ್ಯಾಟಿಂಗ್ ಶೈಲಿ ಏಕದಿನ ಮಾದರಿಗೆ ಹೇಳಿ ಮಾಡಿಸಿದಂತಿಗೆ. ಜಗತ್ತಿನ ಯಾವುದೇ ಬೌಲರ್ ವಿರುದ್ಧ ಉತ್ತಮವಾಗಿ ಆಡುವ ಸಾಮರ್ಥ್ಯ ಅವರಿಗೆ ಇದೆ.

ಕಳೆದ ವಿಶ್ವಕಪ್‌ನಲ್ಲಿ ಪಂದ್ಯಶ್ರೇಷ್ಠ ಆಟಗಾರ
2015 ಮತ್ತು 2019ರ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಫೈನಲ್ ತಲುಪಿತ್ತು. ಈ ಎರಡೂ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ನಾಯಕರಾಗಿದ್ದವರು ಕೇನ್ ವಿಲಿಯಮ್ಸನ್, ದುರದೃಷ್ಠವಶಾತ್ 2015ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರೆ, 2019ರಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. 2019ರ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕೇನ್ ವಿಲಿಯಮ್ಸನ್ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದರು. 2019ರ ಏಕದಿನ ವಿಶ್ವಕಪ್‌ನಲ್ಲಿ 9 ಇನ್ನಿಂಗ್ಸ್‌ಗಳಲ್ಲಿ 82.57 ಸರಾಸರಿಯಲ್ಲಿ 578 ರನ್ ಗಳಿಸಿ ಮಿಂಚಿದ್ದರು.
ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕೇನ್
ಕೇನ್ ಮೊಣಕಾಲಿನ ಗಾಯಕ್ಕೆ ತುತ್ತಾದ ನಂತರ ಜಗತ್ತಿನ ಎಲ್ಲೆಡೆಯಿಂದ ಅವರಿಗೆ ಹಾರೈಕೆಗಳ ಮಹಾಪೂರವೇ ಹರಿದುಬಂದಿದೆ. ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಬೇಗನೆ ಗುಣಮುಖರಾಗಿ ಎಂದು ಹಾರೈಸಿದ್ದಾರೆ. "ಕಳೆದ ಕೆಲವು ದಿನಗಳಿಂದ ನಾನು ಉತ್ತಮ ಬೆಂಬಲವನ್ನು ಪಡೆದಿದ್ದೇನೆ ಮತ್ತು ಅದಕ್ಕಾಗಿ ಗುಜರಾತ್ ಟೈಟಾನ್ಸ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಎರಡಕ್ಕೂ ಧನ್ಯವಾದ ಹೇಳಲು ಬಯಸುತ್ತೇನೆ." ಎಂದು ವಿಲಿಯಮ್ಸನ್ ಹೇಳಿದ್ದಾರೆ.
"ಮೈದಾನದಲ್ಲಿ ಗಾಯಗೊಳ್ಳುವುದು ನಿಜಕ್ಕೂ ನಿರಾಸೆ ಮೂಡಿಸುತ್ತದೆ. ನಾನೀಗ ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಪ್ರಾರಂಭಿಸುವುದರ ಮೇಲೆ ಗಮನ ನೀಡುತ್ತೇನೆ. ಇದು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಸಾಧ್ಯವಾದಷ್ಟು ಬೇಗ ಮೈದಾನಕ್ಕೆ ಮರಳುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.