ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕೆಂಬುದು ಪ್ರತಿಯೊಬ್ಬ ಭಾರತೀಯ ಯುವ ಕ್ರಿಕೆಟಿಗನ ಕನಸಾಗಿರುತ್ತದೆ. ಅಂತಹ ಕನಸು ಹೊತ್ತ ಕರ್ನಾಟಕದ ಯುವ ಆಟಗಾರನೊಬ್ಬ ಭಾರತ ತಂಡದಲ್ಲಿ ಸ್ಥಾನ ಸಿಗದೇ, ಸಪ್ತ ಸಾಗರದಾಚೆ ದಾಟಿ ಹೋಗಿ ಯುಎಸ್ಎ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಹೌದು. ಎಡಗೈ ಸ್ಪಿನ್ನರ್ ನೊಸ್ತುಶ್ ಪ್ರದೀಪ್ ಕೆಂಜಿಗೆ ಭಾರತ ತಂಡದಲ್ಲಿ ಆಡುವ ಕನಸು ಕಂಡಿದ್ದರು. ಆದರೆ, 33 ವರ್ಷದ ಆಟಗಾರ ಅದನ್ನು ಸಾಧಿಸಲು ಯಾವಾಗಲೂ ಕಠಿಣ ಶ್ರಮ ವಹಿಸಿದ್ದರು.

ವರದಿಗಳ ಪ್ರಕಾರ, ಸ್ಪಿನ್ನರ್ ನೊಸ್ತುಶ್ ಪ್ರದೀಪ್ ಕೆಂಜಿಗೆ ಅವರ ಅದೃಷ್ಟ ಮತ್ತು ವೃತ್ತಿಜೀವನ ವಿಭಿನ್ನ ತಿರುವು ಪಡೆದುಕೊಂಡಿತು. ಇದೀಗ ಅವರು 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಯುಎಸ್ಎ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವರಾದ ನೊಸ್ತುಶ್, 2019ರಲ್ಲಿ ಯುಎಸ್ಎ ತಂಡಕ್ಕೆ ಪದಾರ್ಪಣೆ ಮಾಡಿದರು. ಅದಕ್ಕೂ ಮುನ್ನ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ್ದಾರೆ.
ಇತ್ತೀಚಿನ ಮಾತುಕತೆಯಲ್ಲಿ ನೊಸ್ತುಶ್ ಪ್ರದೀಪ್ ಕೆಂಜಿಗೆ ಅವರು ಕೆಲಸಕ್ಕಾಗಿ ಯುಎಸ್ಎಗೆ ತೆರಳಿದ್ದರು. ನಂತರ, ಅಲ್ಲಿನ ಸ್ಥಳೀಯ ಪಂದ್ಯಗಳಲ್ಲಿ ಹೇಗೆ ಆಡುವುದನ್ನು ಮುಂದುವರೆಸಿದರು ಎಂಬುದರ ಕುರಿತು ಮಾತನಾಡಿದ್ದಾರೆ.
ಅಲ್ಲಿನ ಸ್ಥಳೀಯ ಪಂದ್ಯಗಳಲ್ಲಿ ನೊಸ್ತುಶ್ ಪ್ರದೀಪ್ ಕೆಂಜಿಗೆ ಕೋಚ್‌ಗಳನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು ಮತ್ತು ಅದು ಅಂತಿಮವಾಗಿ 2024ರ ಟಿ20 ವಿಶ್ವಕಪ್‌ಗಾಗಿ ಯುಎಸ್ಎ ತಂಡಕ್ಕೆ ಆಯ್ಕೆಯಾಗುವಲ್ಲಿಗೆ ತಂದು ನಿಲ್ಲಿಸಿದೆ.
ಎಡಗೈ ಸ್ಪಿನ್ನರ್ ನೊಸ್ತುಶ್ ಪ್ರದೀಪ್ ಕೆಂಜಿಗೆ ತಂಡದ ಟ್ರಯಲ್ ಹಬ್‌ಗಳಲ್ಲಿ ಕೋಚ್‌ಗಳನ್ನು ಮೆಚ್ಚಿಸಿದರು. ಓಪನ್ ಪಂದ್ಯಗಳು ಮತ್ತು ಆಯ್ಕೆ ಪ್ರಯೋಗಗಳಲ್ಲಿಯೂ ಸಹ ಛಾಪು ಮೂಡಿಸಿದರು.
ಆದಾಗ್ಯೂ, ತಮ್ಮ ಅತ್ಯುತ್ತಮ ಪ್ರದರ್ಶನಗಳ ಹೊರತಾಗಿಯೂ, ನೊಸ್ತುಶ್ ಪ್ರದೀಪ್ ಕೆಂಜಿಗೆ ಅವರು ಯುಎಸ್‌ಎ ತಂಡದ ಜೆರ್ಸಿ ಧರಿಸಲು ಮತ್ತೆ ಮೂರು ವರ್ಷಗಳ ಕಾಲ ಕಾಯಬೇಕಾಯಿತು. ಯುಎಸ್ಎ ಪ್ರಜೆಯಾಗಿದ್ದರೂ, ಅವರು ನಾಲ್ಕು ವರ್ಷಗಳ ಕಾಲ ದೇಶದಲ್ಲಿ ಉಳಿದುಕೊಂಡಿರಲಿಲ್ಲ.
"ನಾನು ಯುಎಸ್‌ಎಗೆ ತೆರಳುವಾಗ, ನನ್ನ ಬದುಕಿನಲ್ಲಿ ಕ್ರಿಕೆಟ್ ಆಟ ಮುಗಿದಿದೆ ಎಂದು ಭಾವಿಸಿದ್ದೆ. ನಾನು ಕೆಲಸ ಮಾಡಲು ಅಲ್ಲಿಗೆ ಹೋಗಿದ್ದೆ, ಆದರೂ ನಾನು ಸ್ಥಳೀಯ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತು," ಎಂದು ನೊಸ್ತುಶ್ ಪ್ರದೀಪ್ ಕೆಂಜಿಗೆ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದರು.
"ಭಾರತದಲ್ಲಿ ಇದಕ್ಕೆ ಭಿನ್ನವಾಗಿ, ಒಬ್ಬ ರಾಷ್ಟ್ರೀಯ ಕ್ರಿಕೆಟಿಗ ತನ್ನ ಆಟದ ಮೇಲೆ ಕೇಂದ್ರೀಕರಿಸುತ್ತಾನೆ. ಆದರೆ ಯುಎಸ್‌ಎನಲ್ಲಿ ನಾವು ಕ್ರಿಕೆಟ್‌ನೊಂದಿಗೆ ನಮ್ಮ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಒಮ್ಮೆ ನನ್ನನ್ನು ಶಿಬಿರಕ್ಕೆ ಆಯ್ಕೆ ಮಾಡಿದ ನಂತರ, ನಾನು ಅರ್ಹ ಆಟಗಾರನಾಗಲು 100 ದಿನಗಳ ಸಮುದಾಯ ಸೇವೆಯನ್ನು ಪೂರ್ಣಗೊಳಿಸಬೇಕಾಗಿತ್ತು. ಇದು ಆಟಗಾರರಿಗೆ ತರಬೇತಿ ನೀಡುವುದು, ಪಂದ್ಯಗಳನ್ನು ಆಡುವುದು ಮತ್ತು ವಿವಿಧ ರೀತಿಯ ಚಟುವಟಿಕೆಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ," ಎಂದು ನೊಸ್ತುಶ್ ಪ್ರದೀಪ್ ಕೆಂಜಿಗೆ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಕೆನಡಾ ತಂಡವನ್ನು ಎದುರಿಸುವ ಮೂಲಕ ಯುಎಸ್ಎ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಜೂನ್ 2ರಂದು ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಯುಎಸ್ಎ ತಂಡವು ಕೆನಡಾ, ಐರ್ಲೆಂಡ್, ಪಾಕಿಸ್ತಾನ ಮತ್ತು ಭಾರತ ತಂಡವನ್ನು ಒಳಗೊಂಡಿರುವ ಎ ಗುಂಪಿನ ಭಾಗವಾಗಿದೆ.