ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಕಳವಳಕಾರಿ ಅಂಶವೆಂದರೆ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ರೋಹಿತ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಂತರ ವೈಫಲ್ಯಗಳ ನಂತರ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೂ ರನ್ ಗಳಿಸುವಲ್ಲಿ ಹಿಂದೆ ಉಳಿದಿದ್ದಾರೆ. ಅವರು ಕೇವಲ 2 ರನ್ ಗಳಿಸಿ ಔಟಾದರು. ಇದೀಗ ರೋಹಿತ್ ಶರ್ಮಾ ಕಳಪೆ ಫಾರ್ಮ್ ಬಗ್ಗೆ ಕಪಿಲ್ ದೇವ್ ಮಾತನಾಡಿದ್ದಾರೆ.
ಕಳೆದ 10 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ 0, 8, 18, 11, 3, 6, 10, 3, 9 ಮತ್ತು 2 ರನ್‌ಗಳಿಗೆ ಔಟಾಗಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಕಣ್ಮರೆಯಾಗಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಫಾರ್ಮ್‌ಗೆ ಬರುವುದು ಭಾರತಕ್ಕೆ ಬಹಳ ಮುಖ್ಯ ಎಂದು ಅನೇಕ ಅನುಭವಿ ಆಟಗಾರರು ಹೇಳಿದ್ದಾರೆ. ಈಗ ಕಪಿಲ್ ದೇವ್ ಭಾರತ ತಂಡದ ನಾಯಕನ ಪ್ರದರ್ಶನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರ ಕಳಪೆ ಫಾರ್ಮ್‌ನಿಂದಾಗಿ ತಂಡವು ಅಸ್ಥಿರವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಕಪಿಲ್ ದೇವ್, 'ರೋಹಿತ್ ಒಬ್ಬ ದೊಡ್ಡ ಆಟಗಾರ. ಅವರು ಶೀಘ್ರದಲ್ಲೇ ಫಾರ್ಮ್‌ಗೆ ಮರಳುತ್ತಾರೆ ಅಂದುಕೊಂಡಿದ್ದೇನೆ. ನಾನು ಕೋಚ್‌ಗೆ ಶುಭ ಹಾರೈಸುತ್ತೇನೆ. ಗಟ್ಟಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಇಡೀ ದೇಶ ತಂಡದ ಪ್ರದರ್ಶನವನ್ನು ನೋಡುತ್ತಿದೆ. ಇತ್ತೀಚಿನ ದಿನಗಳಲ್ಲಿ ತಂಡವು ಉತ್ತಮವಾಗಿ ಆಡುತ್ತಿದೆ. ನಾಯಕನ ಕಳಪೆ ಫಾರ್ಮ್‌ನಿಂದ ತಂಡ ಅಸ್ಥಿರವಾಗಿ ಕಾಣುತ್ತಿದೆ. ನಾಯಕನ ಫಾರ್ಮ್ ಕೆಟ್ಟದಾಗಿದ್ದಾಗ, ತಂಡವು ಸಮಸ್ಯೆಗಳನ್ನು ಎದುರಿಸುತ್ತದೆ ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲಲ್ಲಿ ರೋಹಿತ್ ಕಳೆದ 8 ಪಂದ್ಯಗಳಲ್ಲಿ 10.93 ಸರಾಸರಿಯಲ್ಲಿ ಕೇವಲ 164 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸೇರಿತ್ತು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಸರಣಿಗಳನ್ನು ಸೋತ ನಂತರ ಅವರ ನಾಯಕತ್ವವೂ ಪ್ರಶ್ನಾರ್ಹವಾಯಿತು. ಆದ್ದರಿಂದ, ರೋಹಿತ್ ಮೇಲೆ ಹೆಚ್ಚಿನ ಒತ್ತಡವಿದ್ದು, ಟೆಸ್ಟ್ ತಂಡದಲ್ಲಿ ಅವರ ಭವಿಷ್ಯವೂ ಅನಿಶ್ಚಿತವಾಗಿದೆ.
ರೋಹಿತ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ 2023 ರ ಏಕದಿನ ವಿಶ್ವಕಪ್‌ನಲ್ಲಿ ಭಾರತಕ್ಕೆ ಅಬ್ಬರದ ಆರಂಭ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬರುವ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಅವರು ತಂಡಕ್ಕಾಗಿ ಇದೇ ರೀತಿಯ ಪಾತ್ರವನ್ನು ನಿರ್ವಹಿಸುವ ಗುರಿಯನ್ನು ಹೊಂದಿದ್ದಾರೆ. ಆದಾಗ್ಯೂ, ಅದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ರೋಹಿತ್ ತಮ್ಮ ಲಯವನ್ನು ಕಂಡುಕೊಳ್ಳಬೇಕಾಗಿದೆ.