ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ನಡುವೆ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದರು. ಅವರ ಈ ನಿರ್ಧಾರ ಭಾರತೀಯ ಕ್ರಿಕೆಟ್ ಲೋಕದಲ್ಲಿ ತಲ್ಲಣ ಮೂಡಿಸಿದೆ. ಅವರ ನಿವೃತ್ತಿಗೆ ಕಾರಣವೇನು ಎಂಬ ಒಂದೇ ಒಂದು ಪ್ರಶ್ನೆ ಎಲ್ಲೆಡೆ ಇತ್ತು. ಈ ಬಗ್ಗೆ ಸ್ವತಃ ಮಾಜಿ ನಾಯಕ ಕಪಿಲ್ ದೇವ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅಶ್ವಿನ್ ಅವರ ದಿಢೀರ್ ನಿವೃತ್ತಿ ನಿರ್ಧಾರದಿಂದ ಆಶ್ಚರ್ಯವಾಯಿತು ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಕಪಿಲ್ ದೇವ್ ಅವರು ಅಶ್ವಿನ್ ನಿವೃತ್ತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅಶ್ವಿನ್ ವ್ಯಕ್ತಿತ್ವವನ್ನು ಕಪಿಲ್ ದವ್ ಅವರು ಹೊಗಳಿದ್ದಾರೆ.

ಅಶ್ವಿನ್ ತುಂಬಾ ದೃಢನಿಶ್ಚಯದ ವ್ಯಕ್ತಿ. ಕ್ರಿಕೆಟಿಗರಲ್ಲಿ ಇಂತಹ ನಡವಳಿಕೆಯನ್ನು ನೋಡಲು ಇಷ್ಟಪಡುತ್ತೇನೆ. ಅವರು ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ನಿವೃತ್ತರಾದಾಗ ನನಗೆ ಸ್ವಲ್ಪ ಬೇಸರವಾಯಿತು. ಅವರು ಕ್ರಿಕೆಟ್ ಆಟವನ್ನು ತುಂಬಾ ಉತ್ತಮಗೊಳಿಸಿದ ಶ್ರೇಷ್ಠ ಕ್ರಿಕೆಟಿಗ. ಆದರೆ ಅವರು ಕಾದು ನಿವೃತ್ತಿ ಘೋಷಣೆಯನ್ನು ವಿಭಿನ್ನವಾಗಿ ಮಾಡಬಹುದಿತ್ತು. ಆದರೂ ಅವರು ದೇಶಕ್ಕಾಗಿ ಮಾಡಿರುವ ಕೆಲಸ ನಂಬಲಸಾಧ್ಯ ಎಂದು ಸಂದರ್ಶನದಲ್ಲಿ ಅಶ್ವಿನ್ ಬಗ್ಗೆ ಕಪಿಲ್ ದೇವ್ ಮಾತನಾಡಿದ್ದಾರೆ.
ಅಶ್ವಿನ್ ನಿವೃತ್ತಿ ಘೋಷಣೆ ಬಳಿಕ 1983ರ ವಿಶ್ವ ಚಾಂಪಿಯನ್ ನಾಯಕ ಕಪಿಲ್ ದೇವ್ ಅವರಿಗೆ ಕರೆ ಮಾಡಿದ್ದರು. ಈ ವೇಳೆ ನಿವೃತ್ತಿ ಕುರಿತು ಚರ್ಚಿಸಿದ್ದರು. ಇದಾದ ಬಳಿಕ ಕಪಿಲ್ ದೇವ್ ಕರೆ ಮಾಡಿದ ಸ್ಕ್ರೀನ್‌ಶಾಟ್ ಅನ್ನು ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸ್ಕ್ರೀನ್‌ಶಾಟ್‌ನಲ್ಲಿ ಕಪಿಲ್ ದೇವ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಕಾಲ್ ಲಾಗ್‌ಗಳು ಕಂಡು ಬಂದಿದ್ದವು.
ಆರ್ ಅಶ್ವಿನ್ ಅತ್ಯುತ್ತಮ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದರು. ಯಾವುದೇ ಭಾರತೀಯ ಬೌಲರ್ ಮಾಡಲು ಸಾಧ್ಯವಾಗದಂತಹ ಅನೇಕ ಸಾಧನೆಗಳನ್ನು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿದ್ದರು. ಅವರು 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಅಲ್ಲದೆ, ಅಶ್ವಿನ್ 116 ಏಕದಿನ ಪಂದ್ಯಗಳನ್ನು ಆಡಿದ್ದು, 156 ವಿಕೆಟ್‌ಗಳನ್ನು ಕಬಳಿಸಿದ್ದರೆ, 65 ಟಿ20 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಅಶ್ವಿನ್ ಟೆಸ್ಟ್ ಕ್ರಿಕೆಟ್ ಸೇರಿದಂತೆ ಎಲ್ಲಾ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿ ನಿವೃತ್ತರಾಗಿದ್ದಾರೆ. ಇನ್ನೂ ಮುಂದೆ ಲೀಗ್ ಕ್ರಿಕೆಟ್‌ನಲ್ಲಿ ಅಶ್ವಿನ್ ಆಟವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ನೋಡಬಹುದಾಗಿದೆ.