ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆತಿಥೇಯ ತಂಡದ ಪ್ರದರ್ಶನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಭಾರತ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಸೋಲು ಕಂಡಿದೆ. ಈ ಪ್ರದರ್ಶನವನ್ನು ಕಂಡು ಟೀಮ್ ಇಂಡಿಯಾದ ಮಾಜಿ ಆಟಗಾರರು ಟೀಕಿಸಿದ್ದಾರೆ. ಕೋಚ್ ಗೌತಮ್ ಗಂಭೀರ್ ಅವರ ಕಾರ್ಯದ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ವಿರಾಟ್, ರೋಹಿತ್, ಅಶ್ವಿನ್ ನಿವೃತ್ತರಾದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ನಿಟ್ಟಿನಲ್ಲಿ ಪ್ರದರ್ಶನ ನೀಡುತ್ತಿದೆ ಎಂಬ ಪ್ರಶ್ನೆಗಳು ಎದ್ದಿವೆ.
ಟೀಮ್ ಇಂಡಿಯಾದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್‌ಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಹಲವರು ಟೀಕಿಸಿದ್ದಾರೆ. ಇದೇ ಸಾಲಿಗೆ ಈಗ ಭಾರತದ ದಿಗ್ಗಜ ಆಟಗಾರ ಕಪಿಲ್ ದೇವ್ ಸೇರಿಕೊಂಡಿದ್ದಾರೆ. ತಂಡದಲ್ಲಿ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಂತಹ ಬ್ಯಾಟ್ಸ್‌ಮನ್‌ಗಳ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಸ್ಪೋರ್ಟ್‌ಸ್ಟಾರ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಕಪಿಲ್ ದೇವ್, ನಾವು ಈಗ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ತುಂಬಾ ಕಾರ್ಯನಿರತರಾಗಿದ್ದೇವೆ. ಹೀಗಾಗಿ ಬೌಲಿಂಗ್ ಸ್ನೇಹಿ ಪಿಚ್ ಸಿಗುವುದಿಲ್ಲ. ಸ್ಪಿನ್ ಹಾಗೂ ವೇಗದ ಬೌಲರ್‌ಗಳಿಗೆ ಅನುಕೂಲಕರ ಪಿಚ್‌ನಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವುದು ಮುಖ್ಯ. ನೀವು ಈ ಪಿಚ್‌ಗಳ ಮೇಲೆ ಆಡುವುದು ಅಭ್ಯಾಸ ಮಾಡಿಕೊಂಡರೆ, ನಿಮ್ಮ ಆಟದ ಗುಣ ಮಟ್ಟ ಹೆಚ್ಚಾಗುತ್ತದೆ. ಮೈದಾನದಲ್ಲಿ ಹೇಗೆ ಆಡಬೇಕು ಎಂಬುದನ್ನು ತಿಳಿದಿದ್ದ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ ಅವರಂತ ಬ್ಯಾಟರ್‌ಗಳು ಈಗ ನಮ್ಮ ತಂಡದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ರಿಷಭ್ ಪಂತ್ ಆಕ್ರಮಣಕಾರಿಯಾಗಿ ಆಡುವುದೇ ಅವರ ನೈಜ ಆಟವಾಗಿದೆ. ಅವರಿಗೆ ತಾಳ್ಮೆಯಿಂದ ಆಡಲು ಸೂಚಿಸಲು ಸಾಧ್ಯವಿಲ್ಲ. ಸ್ಪಿನ್ ಬೌಲರ್‌ಗಳನ್ನು ಎದುರಿಸಲು ಫುಟ್‌ವರ್ಕ್ ತುಂಬ ಮುಖ್ಯ. ನೀವು ರಿಷಭ್ ಪಂತ್ ಅವರಿಗೆ ತಾಳ್ಮೆಯಿಂದ ಆಡಿ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಅವರು ಒಬ್ಬ ಮ್ಯಾಚ್‌ವಿನ್ನರ್. ಅವರು ದೊಡ್ಡ ಹೊಡೆತಗಳನ್ನು ಬಾರಿಸಲಷ್ಟೇ ನೋಡುತ್ತಾರೆ. ಅವರು 100 ಎಸೆತಗಳನ್ನು ಎದುರಿಸಿ 20 ರನ್ ಬಾರಿಸುವ ಬ್ಯಾಟರ್ ಅಲ್ಲ. ಅವರು ಸಿಕ್ಸರ್ ಬಾರಿಸಿದಾಗ ಎದುರಾಳಿಗಳು ಕಂಗಾಲಾಗುತ್ತಾರೆ. ಅಲ್ಲದೆ ಮೈದಾನದಲ್ಲಿ ಅಭಿಮಾನಿಗಳು ಕುಣಿಯುತ್ತಾರೆ. ನೀವು ಅವರಿಗೆ ಸಿಕ್ಸರ್ ಬಾರಿಸಬೇಡಿ ಎಂದು ಹೇಳಲು ಆಗುವುದಿಲ್ಲ. ಅವರು ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಬಲ್ಲ ಬ್ಯಾಟರ್ ಆಗಿದ್ದಾರೆ ಎಂದು ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.

ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಪರಿಣಾಮ ತವರಿನಲ್ಲಿ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿತ್ತು. ಈಗ ಟೀಮ್ ಇಂಡಿಯಾ ಈ ಸೋಲಿನ ಕಹಿಯನ್ನು ಮರೆತು ಏಕದಿನ ಸರಣಿಯಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ.