ವಡೋಧಾರದಲ್ಲಿ ನಡೆದ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ರೋಚಕ ಪಂದ್ಯವನ್ನುಗೆದ್ದು ಬೀಗಿದೆ. ಬರೋಡಾ ಈ ಪಂದ್ಯವನ್ನು ಗೆಲ್ಲುವ ಆಸೆಗೆ ಬ್ರೇಕ್ ಬಿದ್ದಿತು. ಸಂಘಟಿತ ಆಟದ ಪ್ರದರ್ಶನ ನೀಡಿದ ಮಯಾಂಕ್ ಪಡೆ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 50 ಓವರ್ ಗಳಲ್ಲಿ 8 ವಿಕೆಟ್‌ಗೆ 281 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬರೋಡಾ 49.5 ಓವರ್ ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಯಿತು. ಕೊನೆಯ ಓವರ್‍ನ ವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿತು. ಉತ್ತಮ ಕ್ಯಾಚ್‌ಗಳನ್ನು ಪಡೆದ ಮಯಾಂಕ್ ಪಡೆ ಪಂದ್ಯದ ಗತಿಯನ್ನೇ ಬದಲಿಸಿತು. ಕೊನೆಯ ಓವರ್‍ನಲ್ಲಿ ಅಭಿಲಾಶ್ ಶೆಟ್ಟಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಜಯದ ಮಾಲೆ ತೊಡಿಸಿದರು.

ಕರ್ನಾಟಕದ ಪರ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತ ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಮೊದಲ ವಿಕೆಟ್‌ಗೆ 30 ರನ್‌ಗಳ ಜೊಯಾಟವನ್ನು ನೀಡಿದರು. ಟೂರ್ನಿಯದಕ್ಕೂ ಸ್ಥಿರ ಪ್ರದರ್ಶನ ನೀಡಿದ ಮಯಾಂಕ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಎರಡನೇ ವಿಕೆಟ್‌ಗೆ ಕೆವಿ ಅನೀಶ್ ಹಾಗೂ ಆರಂಭಿಕ ದೇವದತ್ ಪಡಿಕ್ಕಲ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಅನೀಶ್ 52 ರನ್ ಬಾರಿಸಿ ಔಟ್ ಆದರು.
ಭರವಸೆಯ ಆಟಗಾರ ದೇವದತ್ ಪಡಿಕ್ಕಲ್, ಬರೋಡಾ ತಂಡದ ಬೌಲರ್‌ಗಳನ್ನು ಕಾಡಿದರು. ಇವರು 99 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸರ್ ಸಹಾಯದಿಂದ 102 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಉಳಿದಂತೆ ಆರ್, ಸ್ಮರಣ್ ಹಾಗೂ ಕೃಷ್ಣ ಶ್ರೀಜೇತ ತಲಾ 28 ರನ್ ಬಾರಿಸಿದರು.
ಬರೋಡಾದ ಪರ ರಾಜ್ ಲಿಂಬಾನಿ ಹಾಗೂ ಅತಿತ್ ಸೇಠ್ ತಲಾ ಮೂರು ವಿಕೆಟ್ ಪಡೆದರು.

ಬರೋಡಾ ಪರ ನಿನಾದ್ ರಾತ್ವಾ ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಆರಂಭಿಕ ಶಾಶ್ವತ್ ರಾವತ್ ಹಾಗೂ ಆತಿತ್ ಸೇಠ್ ಉತ್ತಮ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವದರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿತು. ಅತಿತ್ 56 ರನ್ ಬಾರಿಸಿ ಅಬ್ಬರಿಸಿದರು. ಮೂರನೇ ವಿಕೆಟ್‌ಗೆ ಆರಂಭಿಕ ಶಾಶ್ವತ್ ಜೊತೆಗೂಡಿದ ಕೃಣಾಲ್ ಪಾಂಡ್ಯ (30) ತಂಡಕ್ಕೆ ಅರ್ಧಶತಕ ಜೊತೆಯಾಟ ನೀಡಿದರು. ಮಧ್ಯಮ ಕ್ರಮಾಂಕದ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಆರಂಭಿಕ ಆಟಗಾರ ಶಾಶ್ವತ್ ರಾವತ್ 9 ಬೌಂಡರಿ, 1 ಸಿಕ್ಸರ್, ಸಹಾಯದಿಂದ 104 ರನ್ ಬಾರಿಸಿ ಔಟ್ ಆದರು.
ಕರ್ನಾಟಕದ ಪರ ಸ್ಟಾರ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಎರಡು ವಿಕೆಟ್ ಪಡೆದರು. ಪ್ರಸಿದ್ಧ ಕೃಷ್ಣಾ, ವಾಸುಕಿ ಕೌಶಿಕ್, ಅಭಿಲಾಶ್ ಶೆಟ್ಟಿ ತಲಾ ಎರಡು ವಿಕೆಟ್ ಪಡೆದರು.