ಪ್ರಸಕ್ತ ರಣಜಿ ಟೂರ್ನಿಯಲ್ಲಿ ಮೊದಲ ಗೆಲುವಿನ ಕನಸು ಕಾಣುತ್ತಿದ್ದ ಕರ್ನಾಟಕ ತಂಡದ ಆಸೆ, ಎರಡನೇ ಪಂದ್ಯದಲ್ಲೂ ಮಣ್ಣು ಪಾಲಾಗಿದೆ. ಶಿವಮೊಗ್ಗದಲ್ಲಿ ನಡೆದ "ಬಿ" ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಗೋವಾ ವಿರುದ್ಧ ಡ್ರಾ ಸಾಧಿಸಿದೆ. ಈ ವೇಳೆ ಕರ್ನಾಟಕ ಗೋವಾಗೆ ಫಾಲೋ ಆನ್ ನೀಡಿತ್ತು. ಆದರೆ ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಈ ಡ್ರಾ ಮೂಲಕ ಕರ್ನಾಟಕ 2 ಪಂದ್ಯದಲ್ಲೂ ಡ್ರಾ ಸಾಧಿಸಿದ್ದು, 4 ಅಂಕಗಳೊಂದಿಗೆ ಬಿ ಗುಂಪಿನ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಮಂಗಳವಾರ ಗೋವಾ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 171 ರನ್‌ಗಳಿಂದ ಆಟ ಮುಂದುವರೆಸಿತು. ಆದರೆ ಗೋವಾ 217 ರನ್‌ಗಳಿಗೆ ಆಲೌಟ್ ಆಯಿತು. ಗೋವಾ ತಂಡದ ಪರ ಅರ್ಜುನ್ ತೆಂಡೂಲ್ಕರ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 47 ರನ್ ಬಾರಿಸಿದರೆ, ಮೋಹಿತ್ ರೆಡ್ಕರ್ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡದ ಪರ ವಿದ್ವತ್ ಕಾವೇರಪ್ಪ 5, ಅಭಿಲಾಷ್ ಶೆಟ್ಟಿ 3 ವಿಕೆಟ್ ಉರುಳಿಸಿ ಅಬ್ಬರಿಸಿದರು.

ಫಾಲೋ ಆನ್ ಪಡೆದ ಬ್ಯಾಟಿಂಗ್ ಆರಂಭಿಸಿದ ಗೋವಾ ತಂಡದ ಆರಂಭಿಕ ಆಟಗಾರ ಸುಯೇಶ್ ಪ್ರಭುದೇಸಾಯಿ (13) ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಮಂಥನ್ ಖುತ್ಕರ್ (ಅಜೇಯ 55) ಹಾಗೂ ಅಭಿನವ್ ತೇಜ್ರಾನಾ (ಅಜೇಯ 73) ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡವನ್ನು ಮೇಲೆತ್ತುವ ಕಾರ್ಯವನ್ನು ಮಾಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 123 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಗೋವಾ ಎರಡನೇ ಇನಿಂಗ್ಸ್‌ನಲ್ಲಿ 46 ಓವರ್‌ಗಳಲ್ಲಿ 1 ವಿಕೆಟ್‌ಗೆ 143 ರನ್ ಬಾರಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಕರ್ನಾಟಕ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 371 ರನ್‌ಗಳಿಗೆ ಆಲೌಟ್ ಆಯಿತು. ಭರವಸೆಯ ಆಟಗಾರ ಕರುಣ್ ನಾಯರ್ ಅಜೇಯ 174 ರನ್ ಬಾರಿಸಿದ್ದರು. ಇವರ ಕ್ಲಾಸಿಕ್ ಆಟದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಕರ್ನಾಟಕ ತನ್ನ ಲೀಗ್ ಹಂತದ ಮೂರನೇ ಪಂದ್ಯವನ್ನು ಕೇರಳ ವಿರುದ್ಧ ಆಡಲಿದೆ. ಈ ಪಂದ್ಯ ನವೆಂಬರ್ 1 ರಿಂದ ಆರಂಭವಾಗಲಿದೆ.
"ಬಿ" ಗುಂಪಿನ ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರ 144 ರನ್‌ಗಳಿಂದ ಚಂಡೀಗಡ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಿತು. ಮಹಾರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 313 ರನ್‌ಗೆ ಆಲೌಟ್ ಅಗಿದ್ದರೆ, ಚಂಡೀಗಡ್ ಮೊದಲ ಇನಿಂಗ್ಸ್‌ನಲ್ಲಿ 209 ರನ್ ಕಲೆ ಹಾಕಿತು. ಎರಡನೇ ಇನಿಂಗ್ಸ್ ಆರಂಭಿಸಿದ ಮಹಾರಾಷ್ಟ್ರ 3 ವಿಕೆಟ್‌ಗೆ 359 ರನ್ ಬಾರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಚಂಡೀಗರ್ ಎರಡನೇ ಇನಿಂಗ್ಸ್‌ನಲ್ಲಿ 319 ರನ್ ಕಲೆ ಹಾಕಿ ಸೋಲು ಕಂಡಿತು.