ಕರ್ನಾಟಕ ತಂಡದ ಭರ್ಜರಿ ಬ್ಯಾಟಿಂಗ್, 'ಭಾರತ ಎ' ಗೆ 340 ರನ್ ಗುರಿ

Posted By:
Karnataka scores 339 runs against India A

ಧರ್ಮಶಾಲಾ, ಮಾರ್ಚ್‌ 06: ದೇವ್‌ಧರ್ ಟ್ರೋಫಿಯ ಮೊದಲನೇ ಪಂದ್ಯವನ್ನು ಗೆದ್ದು ಬೀಗಿದ ಕರ್ನಾಟಕ ತಂಡ ಎರಡನೇ ಪಂದ್ಯದಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿದೆ. ಇಂದು ಭಾರತ ಎ ವಿರುದ್ಧ ಎರಡನೇ ಪಂದ್ಯ ಆಡುತ್ತಿರುವ ಕರ್ನಾಟಕ ಭರ್ಜರಿ ಬ್ಯಾಟಿಂಗ್ ನಡೆಸಿ 339 ರನ್‌ಗಳ ಬೃಹತ್‌ ಮೊತ್ತವನ್ನು ಪೇರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜ್ಯ ಉತ್ತಮ ಆರಂಭವನ್ನೇ ಪಡೆಯಿತು, ಮಯಾಂಕ್ ಅಗರ್ವಾಲ್ 1 ಸಿಕ್ಸರ್ ಮತ್ತು 3 ಬೌಂಡರಿ ಭಾರಿಸಿ 22 ರನ್ ಗಳಿಸಿ ಔಟಾದರು. ಆ ನಂತರ 35 ರನ್ ಗಳಿಸಿ ಆಡುತ್ತಿದ್ದ ಕರುಣ್ ನಾಯರ್ ಔಟಾದರು.

ನಿನ್ನೆಯ ಪಂದ್ಯದಲ್ಲಿ ಶತಕ ಭಾರಿಸಿ ಮಿಂಚಿದ್ದ ಆರ್.ಸಮರ್ಥ್ ಇಂದೂ ಸಹ ಅತ್ಯುತ್ತಮ ಆಟವಾಡಿದರು. ಪವನ್ ದೇಶಪಾಂಡೆ ಜೊತೆಗೆ ಇನ್ನಿಂಗ್ಸ್ ಕಟ್ಟಿದ ಸಮರ್ಥ್‌ 87 ಎಸೆತದಲ್ಲಿ 85 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಇದ್ದವು. ರಾಜ್ಯದ ಪರ ಅತಿ ಹೆಚ್ಚು ರನ್ ಗಳಿಸಿದ್ದು ಪವನ್ ದೇಶಪಾಂಡೆ. ಅವರು ಕೇವಲ 87 ಎಸೆತದಲ್ಲಿ 95 ರನ್ ಗಳಿಸಿ ಔಟಾಗಿ ಕೇವಲ ಐದು ರನ್‌ನಿಂದ ಶತಕ ವಂಚಿತರಾದರು.

ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಇದ್ದವು. ಕಳೆದ 10 ಇನ್ನಿಂಗ್ಸ್‌ನಲ್ಲಿ 8 ಬಾರಿ 40 ರನ್‌ಗೂ ಹೆಚ್ಚು ರನ್ ಗಳಿಸಿರುವ ಅವರು ಇಂದು 95 ರನ್ ಗಳಿಸಿ ಮಿಂಚಿದರು. ಭಾರತ ಎ ತಂಡದ ಎಲ್ಲ ಬೌಲರ್‌ಗಳನ್ನೂ ಅವರು ದಂಡಿಸಿದರು. ಕೊನೆಗೆ ಅನುಭವಿ ಬೌಲರ್‌ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.

ಆ ನಂತರ ಬಹಳ ದಿನಗಳ ನಂತರ ಅಲ್ಪ ಸ್ವಲ್ಪ ಬ್ಯಾಟ್ ಬೀಸಿದ ಸ್ಟುವರ್ಟ್‌ ಬಿನ್ನಿ ಔಟಾಗದೆ 37 ರನ್ ಗಳಿಸಿದರು. ಕೀಪರ್ ಗೌತಮ್ ಔಟಾಗದೆ 49 ರನ್ ಗಳಿಸಿದರು. ಅವರಿಗೆ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ.

ಮೊಹಮ್ಮದ್ ಶಮಿ 2 ವಿಕೆಟ್ ಗಳಿಸಿದರು, ಕುಲ್ವಂತ್ ಮತ್ತು ಸೂರ್ಯಕುಮಾರ ಯಾದವ್ ತಲಾ ಒಂದು ವಿಕೆಟ್ ಗಳಿಸಿದರು. ಹೊಸಬರೇ ಹೆಚ್ಚಿಗಿರುವ ಭಾರತ ಎ ತಂಡದ ಮುಂದೆ ರನ್ ಬೆಟ್ಟವನ್ನೇ ಕರ್ನಾಟಕ ತಂಡ ಪೇರಿಸಿದ್ದು, ಕರ್ನಾಟಕ ಈ ಪಂದ್ಯದಲ್ಲಿಯೂ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

Story first published: Tuesday, March 6, 2018, 18:06 [IST]
Other articles published on Mar 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ