ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಇದೆ ನವೆಂಬರ್ 14 ರಿಂದ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಈ ವೇಳೆ ಎಲ್ಲರ ಕಣ್ಣುಗಳು ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಹಬಹುದು ಎಂಬುದರ ಮೇಲೆ ನೆಟ್ಟಿವೆ. ಇದೇ ವೇಳೆ ಕನ್ನಡಿಗ ಕರುಣ್ ನಾಯರ್ ಸಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಭಾರತ ತಂಡದ ಪರ ಆಡಿ ತಂಡದಿಂದ ಕೈ ಬಿಡಲಾಗಿದ್ದ ಕರುಣ್ ನಾಯರ್ ಅವರಿಗೆ 8 ವರ್ಷಗಳ ಬಳಿಕ ಮತ್ತೆ ಅವಕಾಶ ಲಭಿಸಿತ್ತು. ಈ ವೇಳೆ ಇವರು ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಲ್ಲದೆ ಈ ಸರಣಿಯಲ್ಲಿ ಒಂದೇ ಒಂದು ಅರ್ಧಶತ ಬಾರಿಸಿದ್ದರು. ಆದರೆ ಮ್ಯಾನೇಜ್ಮೆಂಟ್ ಇವರ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಇದೇ ಕಾರಣಕ್ಕಾಗಿ ಇವರು ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಆದರೂ ಧೃತಿ ಗೆಡದ ಕರುಣ್ ನಾಯರ್ ದೇಶೀಯ ಟೂರ್ನಿಯಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ.

ಕಳೆದ ಬಾರಿಯ ದೇಶೀಯ ಟೂರ್ನಿಯಲ್ಲಿ ವಿದರ್ಭ ಪರ ಆಡಿ ಸಾಕಷ್ಟು ರನ್‌ಗಳನ್ನು ಸಿಡಿಸಿದ್ದ ಕರುಣ್ ನಾಯರ್, ಇದೇ ಧಾಟಿಯಲ್ಲೇ ಈ ಬಾರಿಯೂ ರನ್ ಕಲೆ ಹಾಕುತ್ತಿದ್ದಾರೆ. ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ಈ ಪಂದ್ಯದಲ್ಲಿ ಇವರು ದೊಡ್ಡ ಇನಿಂಗ್ಸ್ ಕಟ್ಟಿರಲಿಲ್ಲ. ಆದರೆ ಶಿವಮೊಗ್ಗದಲ್ಲಿ ನಡೆದ ಪಂದ್ಯದಲ್ಲಿ ಗೋವಾ ವಿರುದ್ಧ ಅಜೇಯ 174 ರನ್‌ಗಳ ಇನಿಂಗ್ಸ್ ಕಟ್ಟಿ ಮಿಂಚಿದರು. ಇನ್ನು ಕೇರಳ ವಿರುದ್ಧದ ಪಂದ್ಯದಲ್ಲಿ 223 ರನ್ ಬಾರಿಸಿ ಜಯದಲ್ಲಿ ಮಿಂಚಿದ್ದರು. ಇವರ ದ್ವಿಶತಕದ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಕರುಣ್ ಸದ್ಯ ರಣಜಿ ಟ್ರೋಫಿಯಲ್ಲಿ ಆಡಿದ 3 ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ 61ರ ಸರಾಸರಿಯಲ್ಲಿ 488 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 50 ಬೌಂಡರಿ, 5 ಸಿಕ್ಸರ್ ಸೇರಿವೆ. ಇವರು ತಮ್ಮ ಬ್ಯಾಟಿಂಗ್ ಬಲದಿಂದಲೇ ಬಿಸಿಸಿಐ ಆಯ್ಕೆ ಸಮಿತಿಯ ಕದವನ್ನು ತಟ್ಟುತ್ತಿದ್ದಾರೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಇವರನ್ನು ತಂಡದಲ್ಲಿ ಆಯ್ಕೆ ಮಾಡಿದರೆ, ಬಿಗ್ ಇನಿಂಗ್ಸ್ ಕಟ್ಟುವ ಲೆಕ್ಕಾಚಾರವೂ ಕರುಣ್ ಅವರದ್ದಾಗಿದೆ. ಕರುಣ್ ಅವರಿಗೆ ಬಿಸಿಸಿಐ ಚಾನ್ಸ್ ನೀಡುತ್ತಾ ಎಂಬ ಪ್ರಶ್ನೆ ಈಗ ಎದುರಾಗಿದೆ.
ಈ ಬಾರಿ ಕರುಣ್ ನಾಯರ್‌ಗೆ ಅವಕಾಶ ಸಿಕ್ಕಿದೆ ಆದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಕನಸನ್ನು ಹೊಂದಿದ್ದಾರೆ. ಅಲ್ಲದೆ ತವರಿನ ಪಿಚ್‌ಗಳ ಮರ್ಮ ಸಹ ಅವರಿಗೆ ಚೆನ್ನಾಗಿ ಅರಿವು ಇರುವುದರಿಂದ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.