ಐಪಿಎಲ್ ಆರಂಭಕ್ಕೂ ಮುನ್ನವೇ ಈ ಬಾರಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ಸ್ಟಾರ್ ಆಟಗಾರರು ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಳಸಿಕೊಂಡು ಅಬ್ಬರಿಸಿದ್ದಾರೆ. ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಆಟಗಾರರನ್ನು ಅಳೆದು ತೂಗಿ ಮಣೆ ಹಾಕಿದ್ದಾರೆ. ಈ ವೇಳೆ ಹಲವು ಆಟಗಾರರು ಭಾರೀ ಮೊತ್ತವನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಇನ್ನು ಹಲವು ಆಟಗಾರರು ಕಡಿಮೆ ಹಣವನ್ನು ಹೊಂದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಡಿಮೆ ಬೆಲೆಗೆ ದೊಡ್ಡ ಪ್ಲೇಯರ್ ಖರೀದಿ ಮಾಡಿದೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕರುಣ್ ನಾಯರ್ ಅವರನ್ನು ಖರೀದಿ ಮಾಡಿತು. ಇವರ ಮೂಲ ಬೆಲೆ 30 ಲಕ್ಷ ರೂ. ಆಗಿತ್ತು. ಆದರೆ ಡೆಲ್ಲಿ ಇವರಿಗೆ 50 ಲಕ್ಷ ರೂ. ನೀಡಿ ಖರೀದಿ ಮಾಡಿತು. ಕರುಣ್ ಡೆಲ್ಲಿ ತಂಡವನ್ನು ಸೇರಿಕೊಂಡರು. ಈ ಪ್ಲೇಯರ್ ಆಯ್ಕೆ ಮಾಡಿದಾಗ, ಡೆಲ್ಲಿ ಮ್ಯಾನೇಜ್ಮೆಂಟ್‌ನಲ್ಲಿ ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತದೋ ಇಲ್ಲವೋ ಎಂಬ ಬಗ್ಗೆ ಚರ್ಚೆ ಇತ್ತು. ಆದರೆ ದೇಶೀಯ ಟೂರ್ನಿಯಲ್ಲಿ ಕರುಣ್ ನಾಯರ್ ಆಡಿದ ರೀತಿ ಕಂಡು ಡೆಲ್ಲಿ ತಂಡ ಫುಲ್ ಖುಷ್ ಆಗಿದೆ.

ಕರುಣ್ ನಾಯರ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಶನಿವಾರ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದ್ದಾರೆ. ಟೂರ್ನಿಯುದ್ದಕ್ಕೂ ಅಬ್ಬರದ ಬ್ಯಾಟಿಂಗ್ ನಡೆಸಿ ರನ್ ಕಲೆ ಹಾಕಿದ ಕರುಣ್ ಡೆಲ್ಲಿ ತಂಡದ ಮುಖದಲ್ಲಿ ನಗು ತರಿಸಿದ್ದಾರೆ. ಕರುಣ್ ನಾಯರ್ ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ 779 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಶತಕ ಹಾಗೂ 1 ಅರ್ಧಶತಕ ಸೇರಿದೆ. ಈ ಟೂರ್ನಿಯಲ್ಲಿ ಕರುಣ್ ಅವರ ಮತ್ತೊಂದು ವಿಶೇಷತೆ ಅಂದರೆ ಇವರು ಕೇವಲ ಎರಡು ಬಾರಿ ಮಾತ್ರ ಔಟ್ ಆಗಿದ್ದಾರೆ.
ಇನ್ನು ರಣಜಿ ಟ್ರೋಫಿಯಲ್ಲಿ ಕರುಣ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 289 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 1 ಅರ್ಧಶತಕ ಸೇರಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಫಾರ್ಮೆಟ್‌ನಲ್ಲೂ ಕರುಣ್ ಸ್ಥಿರ ಬ್ಯಾಟಿಂಗ್ ನಡೆಸಿದ್ದಾರೆ. ಈ ಟೂರ್ನಿಯಲ್ಲಿ ಇವರು ಆಡಿದ 6 ಪಂದ್ಯಗಳಲ್ಲಿ 255 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಇವರ ಈ ಸ್ಥಿರ ಪ್ರದರ್ಶನ ನಿಶ್ಚಿತವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕರುಣ್ ನಾಯರ್ ಈಗಾಗಲೇ ಐಪಿಎಲ್‌ನಲ್ಲಿ 73 ಪಂದ್ಯಗಳನ್ನು ಆಡಿದ್ದು, 1480 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 10 ಅರ್ಧಶತಕಗಳು ಸೇರಿವೆ. 128ರ ಸ್ಟ್ರೈಕ್ ರೇಟ್‌ನಲ್ಲಿ ಕರುಣ್ ರನ್ ಕಲೆ ಹಾಕಿದ್ದಾರೆ.