ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಇತ್ತ ಭಾರತದಲ್ಲಿ ದೇಶೀಯ ಟೂರ್ನಿಗಳ ಅಬ್ಬರ ಜೋರಾಗಿದೆ. ಈಗ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಹಲವು ಸ್ಟಾರ್ ಆಟಗಾರರು ಅಮೋಘ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚುತ್ತಿದ್ದಾರೆ. ಇನ್ನು ಹಲವು ಆಟಗಾರರು ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದ್ದಾರೆ. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರ ಕರ್ನಾಟಕದ ಕರುಣ್ ನಾಯರ್.
ಬುಧವಾರ ವಿದರ್ಭ ಹಾಗೂ ತಮಿಳು ನಾಡಿನ ನಡುವೆ ವಿಜಯ್ ಹಜಾರೆ ಟೂರ್ನಿಯ ಡಿ ಗುಂಪಿನ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ತಮಿಳು ನಾಡು 48.4 ಓವರ್‌ಗಳಲ್ಲಿ 256 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿದರ್ಭ 43.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 257 ರನ್ ಸೇರಿಸಿ ಜಯ ಸಾಧಿಸಿತು. ಈ ಮೂಲಕ ವಿದರ್ಭ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು "ಡಿ" ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ತಮಿಳು ನಾಡು ಬ್ಯಾಟರ್‌ಗಳಿಗೆ ಕಾಡಿದ್ದ ದರ್ಶನ್ ನಾಲಕಂಡೆ ಅಬ್ಬರಿಸಿದರು. ಇವರ ಕರಾರುವಕ್ ದಾಳಿಗೆ ತಮಿಳುನಾಡು ತಂಡ ಉತ್ತರಿಸುವಲ್ಲಿ ಹೆಣಗಾಟ ನಡೆಸಿತು. ದರ್ಶನ್ 9.4 ಓವರ್ ಬೌಲಿಂಗ್ ಮಾಡಿ 55 ರನ್ ನೀಡಿ 6 ವಿಕೆಟ್ ಪಡೆದರು. ತಮಿಳು ನಾಡು ಪರ ಆರಂಭಿಕ ತುಷಾರ್ ರಹೆಜಾ (75) ಅವರನ್ನು ಹೊರತು ಪಡಿಸಿದರೆ ಬೇರೆ ಯಾವೊಬ್ಬ ಬ್ಯಾಟರ್ ಸಹ ಉತ್ತಮ ಬ್ಯಾಟಿಂಗ್ ನಡೆಸಲಿಲ್ಲ.
ಗುರಿಯನ್ನು ಹಿಂಬಾಲಿಸಿದ ವಿದರ್ಭ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಧ್ರುವ್ ಶೋರೆ, ಯಶ್ ರಾಥೋಡ್ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಆದರೆ, ಕರುಣ್ ನಾಯರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ನಯಕನ ಆಟವಾಡಿದ ಇವರು ಅಬ್ಬರಿಸಿದರು. ಕರುಣ್ 103 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 111 ರನ್ ಬಾರಿಸಿ ಆರ್ಭಟಿಸಿದರು. ಇವರ ಏಕಾಂಗಿ ಹೋರಾಟದ ಫಲವಾಗಿ ವಿದರ್ಭ ಗೆಲುವು ಸಾಧಿಸಿತು.
ಕರುಣ್ ನಾಯರ್ ಕರ್ನಾಟಕದ ಪ್ರತಿಭಾವಂತ ಆಟಗಾರ. ಕರ್ನಾಟಕದಿಂದ ಈಗ ವಿದರ್ಭ ತಂಡವನ್ನು ಕರುಣ್ ಸೇರಿಕೊಂಡಿದ್ದಾರೆ. ಇವರು ಈಗಾಗಲೇ ಭಾರತ ತಂಡದ ಪರ ಆಡಿ ಮಿಂಚು ಹರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೊಹಾಲಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕರುಣ್, ಭಾರತದ ಪರ ಆರು ಟೆಸ್ಟ್ ಪಂದ್ಯಗಳನ್ನು ಆಡಿ 374 ರನ್ ಸಿಡಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ ವಿರುದ್ಧ ದಾಖಲಿಸಿದ ತ್ರಿಬಲ್ ಸೆಂಚುರಿ ಸಹ ಸೇರಿದೆ. ಇವರು ಆಸ್ಟ್ರೇಲಿಯಾ ವಿರುದ್ಧ ಧರ್ಮಶಾಲಾದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈಗ ಮತ್ತೆ ತಂಡಕ್ಕೆ ಮರಳುವ ಕನಸು ಕಾಣುತ್ತಿದ್ದಾರೆ.