
ಮುಂಬೈ, ಜನವರಿ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ತಂಡಗಳಲ್ಲಿ ಬದಲಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಫೆಬ್ರವರಿಯಲ್ಲಿ ಹರಾಜು ಪ್ರಕ್ರಿಯೆಗೂ ಮುನ್ನ ಆಟಗಾರರ ಆಯ್ಕೆ ಬಗ್ಗೆ ಪ್ರತಿ ತಂಡ ತನ್ನದೇ ಆದ ರಣತಂತ್ರ ಸಿದ್ಧಪಡಿಸಿಕೊಳ್ಳುತ್ತಿದೆ. ಈ ನಡುವೆ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್ ಆಯ್ಕೆ ಟ್ರಯಲ್ಸ್ ಆರಂಭಿಸಿದ್ದು, ಕಾಶ್ಮೀರದ ಯುವ ವೇಗಿಗೆ ಆಹ್ವಾನ ಸಿಕ್ಕಿದೆ.
19 ವರ್ಷ ವಯಸ್ಸಿನ ಕಾಶ್ಮೀರಿ ಮುಜ್ತಬಾ ಯುಸುಫ್ ಅವರು ಮುಂಬೈ ಇಂಡಿಯನ್ಸ್ ಆಯ್ಕೆ ಟ್ರಯಲ್ಸ್ ನಲ್ಲಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಜ್ತಬಾ ಉತ್ತಮ ಪ್ರದರ್ಶನ ನೀಡಿದ್ದು, ಈಗ ಮುಂಬೈ ತಂಡಕ್ಕೆ ಆಯ್ಕೆಯಾಗುವ ಉತ್ಸಾಹದಲ್ಲಿದ್ದಾರೆ.
ದಕ್ಷಿಣ ಕಾಶ್ಮೀರದ ಬಿಜ್ಬೆಹಾರಾ ಪಟ್ಟಣದವರಾದ ಮುಜ್ತಬಾ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಲೀಗ್ ಹಂತದ 4 ಪಂದ್ಯಗಳಲ್ಲಿ 5 ವಿಕೆಟ್ ಗಳಿಸಿದ್ದಾರೆ. ಫೆಬ್ರವರಿ 19ರಂದೇ ಬೆಂಗಳೂರಿನಿಂದ ಮುಂಬೈಗೆ ತೆರಳಿರುವ ಸುದ್ದಿ ಬಂದಿದೆ.
ಇದಕ್ಕೂ ಮುನ್ನ ಯುಎಇಯಲ್ಲಿ ನಡೆದ ಐಪಿಎಲ್ 2020ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ನೆಟ್ ಬೌಲರ್ ಆಗಿ ಮುಜ್ತಬಾ ಅವರಿಗೆ ಅನುಭವವಿದೆ. ಕಳೆದ ಸೀಸನ್ ನಲ್ಲಿ ಜಮ್ಮು ಹಿರಿಯ ತಂಡದಲ್ಲಿ ಆಡಿದ್ದರು. ಏಪ್ರಿಲ್- ಮೇ ತಿಂಗಳಿನಲ್ಲಿ ಐಪಿಎಲ್ ನಡೆಯುವ ಸಾಧ್ಯತೆಯಿದ್ದು, ಶ್ರೀಮಂತ ಲೀಗ್ ನಲ್ಲಿ ಆಡುವ ಅವಕಾಶಕ್ಕಾಗಿ ಮುಜ್ತಬಾ ಕಾದಿದ್ದಾರೆ.
ಕೊವಿಡ್ 19 ಸಾಂಕ್ರಾಮಿಕದ ನಡುವೆ ಯುಎಇಯಲ್ಲಿ ನಡೆದ ಐಪಿಎಲ್ ಯಶಸ್ವಿಯಾದ ಬೆನ್ನಲ್ಲೇ 2021ನೇ ಸಾಲಿನ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲೇ ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ. ದೇಶಿ ಟಿ 20 ಟೂರ್ನಮೆಂಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುತ್ತಿದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಅವರು ಕೂಡಾ ಈ ಬಾರಿ ಐಪಿಎಲ್ ಆಡುವ ಉತ್ಸಾಹದಲ್ಲಿದ್ದಾರೆ.