
ಪುಣೆ, ಏಪ್ರಿಲ್ 4: ಟೀಮ್ ಇಂಡಿಯಾದ ಆಲ್ ರೌಂಡರ್ ಕೇದಾರ್ ಜಾಧವ್, ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಿದ್ದಾರೆ. 21 ದಿನಗಳ ಲಾಕ್‌ಡೌನ್‌ನಲ್ಲಿರುವ ಭಾರತಕ್ಕೆ ಜಾಧವ್, ದೇಣಿಗೆ ನೀಡುವ ಮೂಲಕ ನೆರವಾಗಿದ್ದಾರೆ.
ಟೀಮ್ ಇಂಡಿಯಾವನ್ನು 73 ಏಕದಿನ ಪಂದ್ಯಗಳಲ್ಲಿ, 9 ಟಿ20ಐ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಬ್ಯಾಟಿಂಗ್ ಆಲ್ ರೌಂಡರ್ ಕೇದಾರ್ ಜಾಧವ್‌ಗೆ ತನ್ನ ಕುಟುಂಬದ ಜೊತೆ ಖುಷಿಯಾಗಿ ಕಳೆಯಲು ಹೆಚ್ಚು ಅವಕಾಶ ಲಭಿಸಿರಲಿಲ್ಲ. ಸದ್ಯ ಕುಟುಂಬದ ಜೊತೆಗಿರುವ ಜಾಧವ್ ಇದೇ ಸಂಭ್ರಮವನ್ನು ತೋರಿಕೊಂಡಿದ್ದಾರೆ.
'ಈಕೆ ಜನಿಸುವ ಸರಿಯಾದ ಸಮಯಕ್ಕೆ ನಾನು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದೆ. ಅದಾಗಿ ಸುಮಾರು ಒಂದು ವರ್ಷದವರೆಗೆ ಇವಳ ಜೊತೆ ಸಮಯ ಕಳೆಯಲು ನನಗೆ ಅವಕಾಶ ಲಭಿಸಿರಲಿಲ್ಲ. ಈಗ ಈಕೆ ಸ್ಮಾರ್ಟ್ ಗರ್ಲ್ ಆಗಿ ಬೆಳೆಯುತ್ತಿದ್ದಾಳೆ ಅನ್ನೋದನ್ನು ನಾನೀಗ ನೋಡಿ ಕಲಿಯುತ್ತಿದ್ದೇನೆ,' ಎಂದು ತನ್ನ ಪುತ್ರಿಯನ್ನುದ್ದೇಶಿಸಿ ಜಾಧವ್ ಟೈಮ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
ಕೊರೊನಾ ಹತ್ತಿಕ್ಕುವುದಕ್ಕಾಗಿ ಮಹಾರಾಷ್ಟ್ರ ಸಿಎಂ ರಿಲೀಫ್ ಫಂಡ್ ಮತ್ತು ಮರಾಠ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಆ್ಯಂಡ್ ಅಗ್ರಿಕಲ್ಚರ್ (ಎಂಸಿಸಿಐಎ)ಗೆ ದೇಣಿಗೆ ನೀಡಿರುವ ಜಾಧವ್, 'ವೈದ್ಯಾಧಿಕಾರಿಗಳು ಜನರನ್ನು ಉಳಿಸಲು ಹಗಲು ರಾತ್ರಿಯೆನ್ನದೆ ದುಡಿಯುತ್ತಿರುವಾಗ ಒಂದಿಷ್ಟು ಕೊಡುಗೆ ನೀಡೋದು ನನ್ನ ಕರ್ತವ್ಯವೆಂದು ಭಾವಿಸುತ್ತೇನೆ,' ಎಂದಿದ್ದಾರೆ.