ಜೂನ್ 3 ಸೋಮವಾರ, ಈ ವರ್ಷ ಕ್ರಿಕೆಟ್ ಲೋಕದಿಂದ ಅನುಭವಿ ಆಟಗಾರರು ದೂರ ಸರಿಯುವ ಬಗ್ಗೆ ಸುದ್ದಿಗಳು ಹೆಚ್ಚು ಕೇಳಿ ಬರುತ್ತಿವೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಟೀಮ್ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಗುಡ್ ಬೈ ಹೇಳಿದ್ದಾರೆ.
ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೊರ್ವ ಆಟಗಾರ ಕೇದರ್ ಜಾದವ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2014ರಲ್ಲಿ ಭಾರತದ ಪರ ಪಾದರ್ಪಣೆ ಮಾಡಿದ ಕೇದರ್ ಜಾದವ್ 2020ರಲ್ಲಿ ಕೊನೆಯ ಬಾರಿ ಕಾಣಿಸಿಕೊಂಡ ನಂತರ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಕ್ರಿಕೆಡ್‌ಗೆ ವಿದಾಯ ಹೇಳಿರುವ ಬಗ್ಗೆ ಜಾದವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 1500 ಗಂಟೆಗಳಿಂದ ನನ್ನ ವೃತ್ತಿಜೀವನದುದ್ದಕ್ಕೂ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತಿ ಆಗುತ್ತಿದ್ದೇನೆ ಎಂದು ಹೇಳಿದ್ದಾರೆ.
2019ರ ಏಕದಿನ ವಿಶ್ವಕಪ್‌ನಲ್ಲಿ ಜಾಧವ್ ಭಾರತದ ತಂಡದ ಭಾಗವಾಗಿದ್ದರು. 16 ನವೆಂಬರ್ 2014 ರಂದು ಶ್ರೀಲಂಕಾ ವಿರುದ್ಧ ಚೊಚ್ಚಲ ಏಕದಿನ ಪಂದವನ್ನು ಆಡಿದ್ದರು. ಒಂದು ವರ್ಷದ ಬಳಿಕ ಅಂದರೆ 17 ಜುಲೈ 2015 ರಂದು ಜಿಂಬಾಬ್ವೆ ವಿರುದ್ಧ ಭಾರತ ಪರ ತಮ್ಮ ಚೊಚ್ಚಲ ಟಿ20 ಪಂದ್ಯಕ್ಕಾಗಿ ಕಣಕ್ಕೀಳಿದ್ದರು.
2014 ರಿಂದ 2020ರ ಅವಧಿಯಲ್ಲಿ ಜಾದವ್ 73 ಏಕದಿನ ಮತ್ತು 9 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರ ಕೊನೆಯ ಏಕದಿನ ಪ್ರದರ್ಶನವು 2020ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾಣಬಹುದು. 2017ರಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಟಿ20 ಪಂದ್ಯ ಆಡಿದ್ದರು.
ಮಹಾರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಕೊಲ್ಹಾಪುರ್ ಟಸ್ಕರ್ಸ್ ಪರ ಆಡಿರುವ ಜಾಧವ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಡೆಲ್ಲಿ ಕ್ಯಾಪಿಟಲ್ಸ್, ಕೊಚ್ಚಿ ಕೇರಳ ಟಸ್ಕರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸೇರಿದಂತೆ ಐದು ಫ್ರಾಂಚೈಸಿಗಳಿಗಾಗಿ 93 ಪಂದ್ಯಗಳನ್ನು ಆಡಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದ ಜಾಧವ್ ಒಟ್ಟು 87 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 17 ಶತಕ ಮತ್ತು 23 ಅರ್ಧಶತಕಗಳ ಸಹಾಯದಿಂದ 6,100 ರನ್ ಗಳಿಸಿದ್ದಾರೆ.
2012ರಲ್ಲಿ ಉತ್ತರ ಪ್ರದೇಶದ ವಿರುದ್ಧ ಪ್ರಥಮ ದರ್ಜೆಯ ತ್ರಿಶತಕ (327 ರನ್) ಸಿಡಿಸಿ ಮಿಂಚಿದ್ದರು. 2013-14 ರ ಋತುವಿನಲ್ಲಿ ಜಾದವ್ ಮಹಾರಾಷ್ಟ್ರಕ್ಕೆ ಅರ್ಹತೆ ಪಡೆಯಲು 6 ಶತಕಗಳು ಸೇರಿದಂತೆ ದಾಖಲೆಯ 1,223 ರನ್‌ಗಳನ್ನು ಗಳಿಸಿದ್ದರು.
ಭಾರತ ಪರ 73 ಏಕದಿನ ಪಂದ್ಯಗಳಲ್ಲಿ 52 ಇನಿಂಗ್ಸ್ ಆಡಿರುವ ಕೇದಾರ್ ಜಾಧವ್ ಒಟ್ಟು 1389 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ 9 ಟಿ20 ಪಂದ್ಯಗಳಿಂದ 1 ಅರ್ಧಶತಕದೊಂದಿಗೆ 122 ರನ್ ಕಲೆಹಾಕಿದ್ದಾರೆ.
ಅಲ್ಲದೆ ಬೌಲಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ತೋರಿರುವ ಜಾದವ್, 42 ಇನ್ನಿಂಗ್ಸ್‌ಗಳಲ್ಲಿ 5.15 ರ ಆರ್ಥಿಕತೆ ಮತ್ತು 37.8 ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದಾರೆ.