ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಬಗ್ಗೆ ತಂಡದ ಮೆಂಟರ್ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ ಅವರನ್ನು, ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡ ಬೇಕು ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕ ಕೆವಿನ್ ಪೀಟರ್ಸನ್ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಉತ್ತಮ ಆಯ್ಕೆ ಎಂದು ಕೇವಿನ್ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ ರಾಹುಲ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 60.66 ಸರಾಸರಿಯಲ್ಲಿ 364 ರನ್ ಗಳಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 146.18 ಆಗಿದೆ. ಈ ವೇಳೆ ಇವರ ಬ್ಯಾಟ್‌ನಿಂದ ಮೂರು ಅರ್ಧಶತಕಗಳು ಹೊರ ಬಂದಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ರಾಹುಲ್ ಅವರ ಪ್ರದರ್ಶನವನ್ನು ಕಂಡು ಈ ಹೇಳಿಕೆ ನೀಡಿದ್ದಾರೆ.

ಕನ್ನಡಿಗ ರಾಹುಲ್ ಭಾರತದ ಪರ ಟಿ20 ಮಾದರಿಯಲ್ಲಿ ಶತಕ ಬಾರಿಸಿದ ಆಟಗಾರ. ಇವರು ಭಾರತದ ಪರ ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 2022ರ ವಿಶ್ವಕಪ್ ವೇಳೆ ಅಂಗಳ ಪ್ರವೇಶಿಸಿದ್ದರು. ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ರಾಹುಲ್ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಆಡಿದ್ದರು. ಅಲ್ಲಿಂದ ಅವರು ಭಾರತ ತಂಡದ ಪರ ಟಿ20 ಪಂದ್ಯಗಳನ್ನು ಆಡಿಲ್ಲ. ಕೆಎಲ್ ರಾಹುಲ್ ಅವರ ಇತ್ತೀಚಿನ ಫಾರ್ಮ್ ಅನ್ನು ಗಮನಿಸಿದರೆ, ಅವರು ಭಾರತದ ಟಿ20 ತಂಡಕ್ಕೆ ಮರಳಲು ಅರ್ಹರು ಎಂದು ಕೆವಿನ್ ಪೀಟರ್ಸನ್ ನಂಬಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ಆರ್‌ಸಿಬಿ ವಿರುದ್ಧದ ಸೋಲು ಕಂಡ ಬಳಿಕ ಮೆಂಟರ್ ಕೇವಿನ್ ಪೀಟರ್ಸನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಹುಲ್ ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಆಡಬಹುದು. ಸದ್ಯ ಭಾರತ ತಂಡದಲ್ಲಿ ಆರಂಭಿಕ ಆಟಗಾರರು ಹಾಗೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಇದ್ದಾರೆ. ರಾಹುಲ್ ಸದ್ಯ ಆಡುತ್ತಿರುವ ಧಾಟಿಯನ್ನು ನೋಡಿದರೆ, ವಿಕೆಟ್ ಕೀಪಿಂಗ್ ಮತ್ತು 4 ನೇ ಸ್ಥಾನದಲ್ಲಿ ಆಡುವ ಉತ್ತಮ ಆಟಗಾರ ಎಂದು ಕೇವಿನ್ ತಿಳಿಸಿದ್ದಾರೆ.

ಇದೇ ವೇಳೆ ಕೇವಿನ್ ರಾಹುಲ್ ಅವರ ಪಾಸಿಟಿವ್ ಇಂಟೇಟ್‌ನ್ನು ಶ್ಲಾಘಿಸಿದ್ದಾರೆ. ಚಾಂಪಿಯನ್ಸ್ ಟ್ರೋಫೀಯಲ್ಲಿ ರಾಹುಲ್ ನೀಡಿದ ಪ್ರದರ್ಶನದ ಬಗ್ಗೆಯೂ ಮೆಂಟರ್ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು. ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ರಾಹುಲ್ ಮಹತ್ವದ ಪಾತ್ರವನ್ನು ವಹಿಸಿದ್ದರು. ಇವರು ಫ್ರಾಂಚೈಸಿ ಕ್ರಿಕೆಟ್‌ಗಾಗಿ ರಾಹುಲ್ ಯಾವುದೇ ದೊಡ್ಡ ಬದಲಾವಣೆ ಮಾಡಿಕೊಂಡಿಲ್ಲ. ಕಳೆದ ಕೆಲವು ವರ್ಷಗಳಿಂದ ರಾಹುಲ್ ಉತ್ತಮವಾಗಿ ಆಡುತ್ತಿದ್ದಾರೆ ಎಂದು ಕೇವಿನ್ ಅಭಿಪ್ರಾಯ ಪಟ್ಟಿದ್ದಾರೆ.