1 ಓವರ್‌ನಲ್ಲಿ 6 ಸಿಕ್ಸರ್: ವಿಶ್ವದಾಖಲೆ ಪಟ್ಟಿ ಸೇರಿದ ಕೀರನ್ ಪೊಲಾರ್ಡ್!

ಆ್ಯಂಟಿಗುವಾ: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ ಸತತ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆಗೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಪಾತ್ರರಾಗಿದ್ದಾರೆ. ಬುಧವಾರ (ಮಾರ್ಚ್ 3) ಆ್ಯಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್-ಶ್ರೀಲಂಕಾ ಮೊದಲನೇ ಟಿ20ಐ ಪಂದ್ಯದಲ್ಲಿ ವಿಂಡೀಸ್ ನಾಯಕ ಪೊಲಾರ್ಡ್ ಸಿಕ್ಸ್ ಸಿಕ್ಸರ್ ದಾಖಲೆ ನಿರ್ಮಿಸಿದ್ದಾರೆ.
ಪಂದ್ಯದ 6ನೇ ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿರುವ ಕೀರನ್ ಪೊಲಾರ್ಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ 36 ರನ್ ಬಾರಿಸಿದ ವಿಶ್ವದ 3ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ಚದ ಎರಡನೇ ಬ್ಯಾಟ್ಸ್‌ಮನ್ ಎಂಬ ಮೈಲಿಗಲ್ಲು ಕೂಡ ಸ್ಥಾಪಿಸಿದ್ದಾರೆ.
ಐಪಿಎಲ್‌ನಲ್ಲಿ ಪೊಲಾರ್ಡ್ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರ.

ಅಖಿಲ ಧನಂಜಯ ಬಲಿಪಶು
ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್ ಚಚ್ಚಿಸಿಕೊಂಡ ಕೆಟ್ಟ ದಾಖಲೆಗೆ ಶ್ರೀಲಂಕಾದ ಆಫ್‌ಬ್ರೇಕ್ ಬೌಲರ್ ಅಖಿಲ ಧನಂಜಯ ಕಾರಣರಾಗಿದ್ದಾರೆ. ಧನಂಜಯ ಅವರ 6ನೇ ಓವರ್‌ನಲ್ಲಿ ಪೊಲಾರ್ಡ್ ಸಿಕ್ಸ್ ಸಿಕ್ಸರ್ ದಾಖಲೆ ನಿರ್ಮಿಸಿದರು. ಈ ಪಂದ್ಯದಲ್ಲಿ ಒಟ್ಟು 4 ಓವರ್ ಎಸೆದಿದ್ದ ಧನಂಜಯ 62 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ಧನಂಜಯ ಇದೇ ಪಂದ್ಯದಲ್ಲಿ ಎವಿನ್ ಲೆವಿಸ್, ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್ ವಿಕೆಟ್ ಪಡೆದು ಹ್ಯಾಟ್ರಿಕ್ ದಾಖಲೆ ಕೂಡ ನಿರ್ಮಿಸಿದ್ದಾರೆ.

3 ಬ್ಯಾಟ್ಸ್‌ಮನ್‌ಗಳು ಸಿಕ್ಸ್ ಸಿಕ್ಸ್
ಟಿ20ಐ ಕ್ರಿಕೆಟ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಭಾರತದ ಆಲ್ ರೌಂಡರ್ ಯುವರಾಜ್ ಸಿಂಗ್ ಕಾರಣರಾಗಿದ್ದಾರೆ. 2007ರ ಉದ್ಘಾಟನಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿದ್ದರು. ಇನ್ನು 2007ರ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ನೆದರ್ಲ್ಯಾಂಡ್ಸ್ ವಿರುದ್ಧ ಓವರ್ ಒಂದರಲ್ಲಿ 36 ರನ್ ಚಚ್ಚಿದ್ದರು. ಈಗ ಪೊಲಾರ್ಡ್ ಇದೇ ಸಾಧನೆ ಮಾಡಿದ 3ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಪಂದ್ಯದ ಫಲಿತಾಂಶ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ, ನಿರೋಶನ್ ಡಿಕ್ವೆಲ್ಲಾ 33, ಪಾತುಮ್ ನಿಸ್ಸಂಕ 39, ದಿನೇಶ್ ಚಾಂಡಿಮಾಲ್ 11, ವನಿಂದು ಹಸರಂಗ 12 ರನ್‌ನೊಂದಿಗೆ 20 ಓವರ್‌ಗೆ9 ವಿಕೆಟ್ ಕಳೆದು 131 ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಲೆಂಡ್ಲ್ ಸಿಮ್ಮನ್ಸ್ 26, ಎವಿನ್ ಲೆವಿಸ್ 28, ಕೀರನ್ ಪೊಲಾರ್ಡ್ 38 (11 ಎಸೆತ), ಜೇಸನ್ ಹೋಲ್ಡರ್ 29 ರನ್‌ನೊಂದಿಗೆ 13.1 ಓವರ್‌ಗೆ 6 ವಿಕೆಟ್ ಕಳೆದು 134 ರನ್ ಗಳಿಸಿತು. ವೆಸ್ಟ್ ಇಂಡೀಸ್ 4 ವಿಕೆಟ್ ಗೆಲುವನ್ನಾಚರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications