ಭಾರತ ತಂಡ ಪ್ರಸ್ತುತ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಇದೇ ಸಮಯದಲ್ಲಿ, 26 ವರ್ಷದ ಯುವ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಉಪನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಈ ಪ್ರವಾಸದ ಮೊದಲು, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಗಾಯಕ್ವಾಡ್ ಅವರನ್ನು ಟೆಸ್ಟ್ ಮತ್ತು ಏಕದಿನ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಟೀಮ್ ಇಂಡಿಯಾದ ಮಾಜಿ ಆಯ್ಕೆದಾರ ಕಿರಣ್ ಮೋರೆ ರುತುರಾಜ್ ಗಾಯಕ್ವಾಡ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಓಪನರ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿದ ಆಟಗಾರ. ಚೆನ್ನೈ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ರುತುರಾಜ್ ನಿಸ್ಸೀಮರು. ಯಾವುದೇ ಬೌಲರ್ ಇದ್ದರೂ ರುತುರಾಜ್ ಒಮ್ಮೆ ಸೆಟ್ ಆದರೆ ಮುಗಿದೇ ಹೋಯಿತು. ಬಿಗ್ ಇನಿಂಗ್ಸ್ ಫಿಕ್ಸ್. ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸುವಲ್ಲಿ ರುತುರಾಜ್ ಸಿದ್ಧಹಸ್ತರು. ಈ ಸ್ಟಾರ್ ಆಟಗಾರನ ಆಟವನ್ನು ಕಂಡು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕಿರಣ್ ಮೋರೆ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ರುತುರಾಜ್ ಗಾಯಕ್ವಾಡ್ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದು ತಿಳಿಸಿದ್ದಾರೆ.
ರುತುರಾಜ್ ಗಾಯಕ್ವಾಡ್, ಕಳೆದ ಒಂದು ವರ್ಷದಿಂದ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 16ನೇ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಇವರ ಪಾತ್ರ ಮುಖ್ಯ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕಿರಣ್ ಮೋರೆ, ರುತುರಾಜ್‌ಗೆ ಭವಿಷ್ಯದ ನಾಯಕ ಎಂದು ಹೇಳಿದ್ದಾರೆ.
ಟೆಸ್ಟ್ ಮಾದರಿಯಲ್ಲಿ ರುತುರಾಜ್ ಗಾಯಕ್ವಾಡ್ ಪದಾರ್ಪಣೆ ಮಾಡಲು ಕಾತುರರಾಗಿದ್ದಾರೆ. ವೈಟ್ ಜೆರ್ಸಿಯಲ್ಲಿ ರುತುರಾಜ್ ಅವರನ್ನು ನೋಡಲು ಕಾತುರನಾಗಿದ್ದಾಗಿ ಕಿರಣ್ ಮೋರೆ ತಿಳಿಸಿದ್ದಾರೆ. ಗಾಯಕ್ವಾಡ್ ಎಲ್ಲ ಸ್ವರೂಪದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಕ್ಷಮತೆ ಹೊಂದಿದ್ದಾರೆ. ಭವಿಷ್ಯದಲ್ಲಿ ರುತುರಾಜ್ ಭವಿಷ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಬಹುದು ಎಂದು ಕಿರಣ್ ತಿಳಿಸಿದ್ದಾರೆ.
ರುತುರಾಜ್ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಗಾಯಕ್ವಾಡ್ ಧೋನಿಯ ನಾಯಕತ್ವದ ನಡೆಗಳನ್ನು ಅರಿತುಕೊಂಡಿದ್ದಾರೆ. ಧೋನಿ ನಾಯಕ್ವತದ ಗುಣಗಳು ಇವರ ಮೇಲೂ ಪ್ರಭಾವ ಬೀರಿವೆ ಎಂದು ಕಿರಣ್ ಮೋರೆ ಅಭಿಪ್ರಾಯ ಪಟ್ಟಿದ್ದಾರೆ. ರುತುರಾಜ್ ಅದ್ಭುತ ಸ್ವಭಾವದವರು. ಸಂದರ್ಭಕ್ಕೆ ತಕ್ಕಂತೆ ತಂಡವನ್ನು ನಿಭಾಯಿಸುವ ಕಲೆಯನ್ನು ಅವರು ಧೋನಿಯಿಂದ ಕಲಿತಿರಬೇಕು ಎಂದು ಕಿರಣ್ ತಿಳಿಸಿದ್ದಾರೆ.
ಭವಿಷ್ಯದ ನಾಯಕನ ರೇಸ್‌ನಲ್ಲಿ ಹಲವು ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಯಶಸ್ವಿ ಜೈಸ್ವಾಲ್. ಈ ಯುವ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಶತಕ ಸಿಡಿಸಿದ್ದಾರೆ. ಹೀಗಾಗಿ ಈ ರೇಸ್‌ನಲ್ಲಿ ಇವರು ಸಹ ಮುಂಚೂಣಿಯಲ್ಲಿದ್ದಾರೆ. ಅವಕಾಶ ಸಿಕ್ಕಾಗ ಯಾರು ಚೆನ್ನಾಗಿ ಬಳಸಿಕೊಂಡು ಯಶಸ್ಸಿನ ಮೆಟ್ಟಿಲು ಏರುತ್ತಾನೋ ಅವನೇ ಭವಿಷ್ಯದ ನಾಯಕನಾಗಬಹುದು. ಗಾಯಕ್ವಾಡ್ ಈ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ ಮುನ್ನಡೆಯುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.