ಐಪಿಎಲ್ 2026 ಆವೃತ್ತಿ ಆರಂಭವಾಗುವುದಕ್ಕೆ ಮುನ್ನವೇ ಕೆಕೆಆರ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಹರ್ಷಿತ್ ರಾಣಾ ಐಪಿಎಲ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಇವರು ಮತೀಶ್ ಪತಿರಾಣಾ ಅವರೊಂದಿಗೆ ಡೆತ್ ಓವರ್‌ಗಳಿಗೆ ಬಲ ತುಂಬ ಬಲ್ಲ ಆಟಗಾರರಾಗಿದ್ದರು. ಇವರು ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನವೇ ತಂಡದಿಂದ ಹೊರ ನಡೆದರು. ಈ ಬಗ್ಗೆ ಕೆಕೆಆರ್ ಮ್ಯಾನೇಜ್ಮೆಂಟ್ ಇನ್ನು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಒಂದು ವೇಳೆ ಹರ್ಷಿತ್ ಟೂರ್ನಿಯಿಂದ ಹೊರ ನಡೆದರೆ, ಕೆಕೆಆರ್ ತಂಡಕ್ಕೆ ದೊಡ್ಡ ಪೆಟ್ಟು ಬೀಳಲಿದೆ.
ಹರ್ಷಿತ್ ರಾಣಾ ಟಿ20 ವಿಶ್ವಕಪ್ ಭಾಗವಾಗಿದ್ದರು. ಇವರು ಗಾಯಕ್ಕೆ ತುತ್ತಾಗಿದ್ದರಿಂದ ತಂಡದಿಂದ ಹೊರಗಿಡಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಅವರು ಗಾಯಗೊಂಡರು. ನಂತರ ಅವರನ್ನು ತಂಡದಿಂದ ಕೈ ಬಿಡಲಾಯಿತು. ಇವರು ವಿಶ್ವಕಪ್‌ನಿಂದ ಹೊರಗುಳಿದರೂ ಸಹ ಇವರ ಗಾಯ ಇನ್ನು ಚೇತರಿಸಿಕೊಂಡಿಲ್ಲ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬರುವ ಐಪಿಎಲ್ ಸೀಸನ್‌ನಿಂದ ಹರ್ಷಿತ್ ರಾಣಾ ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ. ಇವರ ಬದಲಿ ಆಟಗಾರನ ಬಗ್ಗೆ ಕೆಕೆಆರ್ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಹರ್ಷಿತ್ ರಾಣಾ ಗಾಯಕ್ಕೆ ತುತ್ತಾಗಿರುವುದು ನಿಜಕ್ಕೂ ಕೆಕೆಆರ್ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ. ಶುಕ್ರವಾರವೇ ಕೆಕೆಆರ್ ಮುಸ್ತಾಫಿಜುರ್ ರಹಮಾನ್ ಬದಲಿಗೆ ಜಿಂಬಾಬ್ವೆ ವೇಗದ ಬೌಲಿಂಗ್ ಬ್ಲೆಸಿಂಗ್ ಮುಜಾರಬಾನಿ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಈಗ ಹರ್ಷಿತ್ ರಾಣಾ ಸ್ಥಾನ ತುಂಬುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಹರ್ಷಿತ್ ರಾಣಾ ಬದಲಿಗೆ ಕೆಕೆಆರ್ ತಂಡ ಈ ದೇಶೀಯ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಆಕಾಶ್ ಮಧ್ವಾಲ್ ಈಗಾಗಲೇ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರ. ಇವರು 2023ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದಾರೆ. ಇವರು ಆಡಿದ ಮೊದಲ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಇವರು ಆಡಿದ 8 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಇವರು ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದರು. 18ನೇ ಆವೃತ್ತಿಯಲ್ಲಿ ಆರ್‌ಆರ್ ಪರ ಆಕಾಶ್ ಮಧ್ವಾಲ್ 4 ಪಂದ್ಯಗಳಲ್ಲಿ 4 ವಿಕೆಟ್ ಕಬಳಿಸಿದ್ದರು.

ಬ್ಯಾಟಿಂಗ್ ಸ್ನೇಹಿ ಪಿಚ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಲು ವಿಫಲರಾದ ಸಿಮರ್ಜೀತ್ ಸಿಂಗ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ಬಿಡುಗಡೆ ಮಾಡಿತ್ತು. 28 ವರ್ಷದ ಸಿಮರ್ಜೀತ್ ಸಿಂಗ್ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಇವರು ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಡಿಪಿಎಲ್‌ನಲ್ಲಿ ಸಿಮರ್ಜೀತ್ ಸಿಂಗ್ ಆಡಿದ 11 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿದ್ದಾರೆ.

ಡೆಲ್ಲಿ ತಂಡದ ಮನಿ ಗ್ರೆವಾಲ್ ಕೆಕೆಆರ್ ತಂಡಕ್ಕೆ ಬಲ ತುಂಬಬಲ್ಲ ಯುವ ಬೌಲರ್. ಇವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವ ಇಲ್ಲ. ಆದರೆ ಇವರು ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇವರು ಸಹ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ, ಸಿಮರ್ಜೀತ್ ಸಿಂಗ್ ಜೊತೆಗೆ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಡೆತ್ ಓವರ್‌ಗಳಲ್ಲಿ ಶಿಸ್ತುಬದ್ಧ ದಾಳಿ ನಡೆಸಲು ಹೆಸರುವಾಸಿ. ಇವರು ಕೆಕೆಆರ್ ತಂಡದ ಡೆತ್ ಓವರ್ ಹೊಣೆಯನ್ನು ಹೊರುವ ಕ್ಷಮತೆ ಹೊಂದಿದ್ದಾರೆ.