ಜುಲೈ 9 ಮಂಗಳವಾರ, ಟಿ20 ವಿಶ್ವಕಪ್ ಗೆಲುವಿನ ಬಳಿಕ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2023ರ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತರೂ, ಟೀಮ್ ಇಂಡಿಯಾವನ್ನು ಟಿ20 ಚಾಂಪಿಯನ್ ಮಾಡುವ ಮೂಲಕ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಫೈನಲ್ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ್ರಾವಿಡ್ ನಗುತ್ತಾ ಹೇಳಿದರು, "ಮುಂದಿನ ವಾರ, ನನ್ನ ಜೀವನವು ಒಂದೇ ಆಗಿರುತ್ತದೆ. ನಾನು ನಿರುದ್ಯೋಗಿಯಾಗುತ್ತೇನೆ. ಯಾರಾದರೂ ಕೆಲಸ ಕೊಡಿ ಎಂದು ತಮಾಷೆ ಮಾಡಿದ್ದರು.

ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ತಮ್ಮ ಮುಂದಿನ ಕೆಲಸಕ್ಕಾಗಿ ಹಲವು ಆಫರ್‌ಗಳನ್ನು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ. ಮುಂದಿನ ಋತುವಿನಲ್ಲಿ ದ್ರಾವಿಡ್ ಅವರಿಗೆ ಕೋಚ್ ಸ್ಥಾನ ನೀಡಲು ಹಲವಾರು ಐಪಿಎಲ್ ಫ್ರಾಂಚೈಸಿ ತಂಡಗಳು ಸಂಪರ್ಕ ಮಾಡಿವೆ ಎಂಬುದು ವರದಿಯಾಗಿದೆ.
ಆ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹೆಸರು ಅಚ್ಚರಿ ಮೂಡಿಸಬಹುದು. ಮೂಲಗಳ ಪ್ರಕಾರ, ಕೆಕೆಆರ್ ಫ್ರಾಂಚೈಸಿ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಅಥವಾ ಮೆಂಟರ್ ಆಗಿ ಪಡೆಯಲು ಸಂಪರ್ಕಿಸಿದೆ. ಇದು ನಿಜವಾಗಿದ್ದರೆ, 2025ರ ಐಪಿಎಲ್‌ನಲ್ಲಿ ದೊಡ್ಡ ಆಶ್ಚರ್ಯ ಎದುರಾಗಲಿದೆ.
ಗೌತಮ್ ಗಂಭೀರ್ ಕಳೆದ ಋತುವಿನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿದ್ದರು. ಗಂಭೀರ್ ಅವರು ಮಾರ್ಗದರ್ಶಕರಾಗಿ ತಂಡಕ್ಕೆ ಮರಳುವ ಮೂಲಕ ಕೆಕೆಆರ್‌ನ 10 ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿಸಿದ್ದರು.
ಆದರೆ ಇದೀಗ ಅವರು ಭಾರತ ತಂಡದ ಹೆಡ್ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದರಿಂದ ಕೆಕೆಆರ್‌ಗೆ ದೊಡ್ಡ ಹೊಡೆತ ಬಿದ್ದಿದೆ.
ಇದರ ಪರಿಣಾಮವಾಗಿ, ಗೌತಮ್ ಗಂಭೀರ್ ಬದಲಿಗೆ ಅರ್ಹತೆ ಮತ್ತು ಅನುಭವ ಎರಡೂ ಹೊಂದಿರುವವರನ್ನು ಕೆಕೆಆರ್ ಹುಡುಕುತ್ತಿದೆ. ರಾಹುಲ್ ದ್ರಾವಿಡ್ ಐಪಿಎಲ್‌ನಲ್ಲಿ ರಾಜಸ್ಥಾನದ ಮಾರ್ಗದರ್ಶಕರಾಗಿ ಮತ್ತು ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ದ್ರಾವಿಡ್ ಐಪಿಎಲ್‌ನಲ್ಲಿ ಕೋಲ್ಕತ್ತಾ ತಂಡಕ್ಕೆ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರೆ, ಕೆಕೆಆರ್ ಮತ್ತೊಮ್ಮೆ ಚಾಂಪಿಯನ್ ಆಗುವ ಎಲ್ಲ ಅವಕಾಶಗಳಿವೆ. ಈ ಲೆಕ್ಕಚಾರಗಳ ಮೇಲೆ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಅಥವಾ ಮೆಂಟರ್ ಮಾಡಲು ಕೆಕೆಆರ್ ಗಾಳ ಹಾಕಿದೆ.
ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ 12 ಕೋಟಿ ರೂಪಾಯಿ ಪಡೆಯುತ್ತಿದ್ದರು. ದ್ರಾವಿಡ್ ಅವರನ್ನು ಪಡೆಯಲು ಐಪಿಎಲ್ ತಂಡಗಳು ಅದಕ್ಕಿಂತ ಹೆಚ್ಚಿನ ಹಣವನ್ನು ನೀಡಲು ಸಿದ್ಧವಾಗಿವೆ ಎಂಬುದು ಕೂಡ ಕೇಳಿಬರುತ್ತಿದೆ.
ಈ ಎಲ್ಲದರ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಕೂಡ ರಾಹುಲ್ ದ್ರಾವಿಡ್ ಅವರನ್ನು ಮೆಂಟರ್ ಮಾಡಬೇಕು ಎಂದು ಆಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ರಾಹುಲ್ ದ್ರಾವಿಡ್ ಕರ್ನಾಟಕದವರಾಗಿದ್ದು, ಆರ್‌ಸಿಬಿ ತಂಡವನ್ನು ಆರಂಭಿಕ ಆವೃತ್ತಿಗಳಲ್ಲಿ ನಾಯಕನಾಗಿ ಮುನ್ನೆಡೆಸಿದ್ದಾರೆ.
ಆದರೆ ಐಪಿಎಲ್‌ನಲ್ಲಿ ಕೋಚ್ ಆಗುವ ಬಗ್ಗೆ ರಾಹುಲ್ ದ್ರಾವಿಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಯಾವ ಫ್ರಾಂಚೈಸಿ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ಪಡೆಯುತ್ತದೆ ಎಂಬುದು ಸದ್ಯಕ್ಕೆ ಆಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.