ಸಾಮಾಜಿಕ ಮಾಧ್ಯಮದಲ್ಲಿ ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಕೇಂದ್ರವಾಗಿಟ್ಟುಕೊಂಡು ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕೆಕೆಆರ್ ತಂಡದ ಆಟಗಾರ ಆಂಗ್‌ಕ್ರಿಶ್ ರಘುವಂಶಿ ಕ್ಷಮೆಯಾಚಿಸಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಯುವ ಬ್ಯಾಟರ್ ಆಂಗ್‌ಕ್ರಿಶ್ ರಘುವಂಶಿ ಸಾಮಾಜಿಕ ಮಾಧ್ಯಮದಲ್ಲಿ ಕ್ರೀಡಾ ಅಭಿಮಾನಿಗಳಿಂದ ಭಾರೀ ಟೀಕೆ ಎದುರಿಸಿದರು.

ಆಂಗ್‌ಕ್ರಿಶ್ ರಘುವಂಶಿ 2024ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು ಮತ್ತು ಬ್ಯಾಟ್‌ನೊಂದಿಗೆ ಸ್ಮರಣೀಯ ಪ್ರದರ್ಶನ ನೀಡಿದರು. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 155.24ರ ಸ್ಟ್ರೈಕ್ ರೇಟ್‌ನಲ್ಲಿ 163 ರನ್ ಗಳಿಸಿದರು.
ಬ್ಯಾಡ್ಮಿಂಟನ್, ಟೆನಿಸ್, ಬಾಸ್ಕೆಟ್‌ಬಾಲ್‌ನಂತಹ ಕ್ರೀಡೆಗಳು ಕ್ರಿಕೆಟ್‌ಗಿಂತಲೂ ದೈಹಿಕವಾಗಿ ಕಠಿಣವಾಗಿವೆ ಎಂದು ಸೈನಾ ನೆಹ್ವಾಲ್ ಹೇಳಿದ ನಂತರ, ಆಂಗ್‌ಕ್ರಿಶ್ ರಘುವಂಶಿ ಅವರ ಹಾಸ್ಯದ ಹೇಳಿಕೆ ಹೊರಬಿದ್ದಿದೆ. ಭಾರತೀಯ ಅಭಿಮಾನಿಗಳು ಯಾವಾಗಲೂ ಇತರ ಕ್ರೀಡೆಗಳಿಗಿಂತ ಕ್ರಿಕೆಟ್‌ಗೆ ಆದ್ಯತೆ ನೀಡುತ್ತಾರೆ ಎಂದು ನಾ ನೆಹ್ವಾಲ್ ಟೀಕಿಸಿದರು.

"ಸೈನಾ ಏನು ಮಾಡುತ್ತಿದ್ದಾರೆ, ಕುಸ್ತಿಪಟುಗಳು ಮತ್ತು ಬಾಕ್ಸರ್‌ಗಳು ಏನು ಮಾಡುತ್ತಿದ್ದಾರೆ, ನೀರಜ್ ಚೋಪ್ರಾ ಏನು ಮಾಡುತ್ತಿದ್ದಾರೆ ಎಂದು ಎಲ್ಲರೂ ತಿಳಿದುಕೊಳ್ಳಲು ಬಯಸುತ್ತಾರೆ. ಈ ಕ್ರೀಡಾಪಟುಗಳು ಎಲ್ಲರಿಗೂ ತಿಳಿದಿದೆ, ಏಕೆಂದರೆ ನಾವು ಸತತವಾಗಿ ಪ್ರದರ್ಶನ ನೀಡಿದ್ದೇವೆ ಮತ್ತು ನಾವು ಮಾಧ್ಯಮದಲ್ಲಿ ಇರುತ್ತೇವೆ".
"ನಾನು ಅದನ್ನು ಮಾಡಿದ್ದೇನೆ, ಕ್ರೀಡಾ ಸಂಸ್ಕೃತಿಯೂ ಇಲ್ಲದ ಭಾರತದಲ್ಲಿ ನಾನು ಅದನ್ನು ಮಾಡಿದ್ದೇನೆ ಎಂಬುದು ಕನಸಿನಂತೆ ನನಗೆ ಅನಿಸುತ್ತದೆ," ಎಂದು ಸೈನಾ ನೆಹ್ವಾಲ್ ಅವರು ನಿಖಿಲ್ ಸಿಂಹ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದರು.

"ಕೆಲವೊಮ್ಮೆ, ಕ್ರಿಕೆಟ್ ಎಲ್ಲರ ಗಮನ ಸೆಳೆಯುತ್ತದೆ ಎಂದು ನನಗೆ ಬೇಸರವಾಗುತ್ತದೆ. ಕ್ರಿಕೆಟ್‌ನ ವಿಷಯವೆಂದರೆ, ನೀವು ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಟೆನಿಸ್ ಮತ್ತು ಇತರ ಕ್ರೀಡೆಗಳನ್ನು ನೋಡಿದರೆ ದೈಹಿಕವಾಗಿ ತುಂಬಾ ಕಠಿಣವಾಗಿದೆ".
"ಷಟಲ್ ಎತ್ತಿ ಹೊಡೆಯಲೂ ಸಮಯವೂ ಇರುವುದಿಲ್ಲ. ನೀವು ಹಾಗೆ... ನೀವು ತುಂಬಾ ಕಷ್ಟಪಟ್ಟು ಉಸಿರಾಡುತ್ತಿದ್ದೀರಿ. ಕ್ರಿಕೆಟ್‌ನಂತಹ ಆಟವು ಹೆಚ್ಚು ಗಮನ ಸೆಳೆಯುತ್ತದೆ, ಅಲ್ಲಿ ನಾನು ವೈಯಕ್ತಿಕವಾಗಿ ಕೌಶಲ್ಯವು ಹೆಚ್ಚು ಮುಖ್ಯವಾಗಿದೆ ಎಂದು ನಂಬುತ್ತೇನೆ," ಎಂದು ಸೈನಾ ನೆಹ್ವಾಲ್ ಅಭಿಪ್ರಾಯಪಟ್ಟರು.
ಸೈನಾ ನೆಹ್ವಾಲ್ ಅವರ ಈ ಮಾತುಗಳು ಕ್ರಿಕೆಟಿಗ ಆಂಗ್‌ಕ್ರಿಶ್ ರಘುವಂಶಿ ಅವರಿಗೆ ಸರಿ ಹೊಂದಲಿಲ್ಲ. ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ "ಜಸ್ಪ್ರೀತ್ ಬುಮ್ರಾ ಅವರ ತಲೆಯ ಮೇಲೆ 150 ಕಿಮೀ ಬಂಪರ್ ಬೌಲ್ ಮಾಡಿದಾಗ ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂದು ನೋಡೋಣ," ಎಂದು ಬರೆದುಕೊಂಡಿದ್ದಾರೆ.
ಕೆಕೆಆರ್ ತಂಡದ ಆಟಗಾರ ಆಂಗ್‌ಕ್ರಿಶ್ ರಘುವಂಶಿ ನಂತರ ತನ್ನ ಟ್ವೀಟ್ ಅನ್ನು ಅಳಿಸಿ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ಗೆ ಕ್ಷಮೆಯಾಚಿಸಿದ್ದಾರೆ.
ಟೀಕೆ ವ್ಯಕ್ತವಾದ ನಂತರ, "ಎಲ್ಲರೂ ನನ್ನನ್ನು ಕ್ಷಮಿಸಿ, ನಾನು ನನ್ನ ಟೀಕೆಗಳನ್ನು ತಮಾಷೆಗಾಗಿ ಅರ್ಥೈಸಿದ್ದೇನೆ. ಹಿಂತಿರುಗಿ ನೋಡಿದಾಗ ಇದು ನಿಜವಾಗಿಯೂ ಅಪಕ್ವವಾದ ಜೋಕ್ ಎಂದು ನಾನು ಭಾವಿಸುತ್ತೇನೆ. ನನ್ನ ತಪ್ಪನ್ನು ನಾನು ಅರಿತುಕೊಂಡೆ ಮತ್ತು ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ," ಎಂದು ಆಂಗ್‌ಕ್ರಿಶ್ ರಘುವಂಶಿ ತಿಳಿಸಿದ್ದಾರೆ.
ಇತರ ಕ್ರೀಡೆಗಳ ಬಗೆಗಿನ ಅಜ್ಞಾನದ ಬಗ್ಗೆ ಕ್ರೀಡಾಪಟುಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, 2022ರಲ್ಲಿ ಥಾಮಸ್ ಕಪ್ ಚಾಂಪಿಯನ್ ಆಗಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಚಿರಾಗ್ ಶೆಟ್ಟಿ ಅವರು ಟಿ20 ವಿಶ್ವಕಪ್ ವಿಜೇತರನ್ನು ಅಭಿನಂದಿಸಿದ್ದಕ್ಕಾಗಿ ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಿದರು.