ಸೋಮವಾರ, ಏಪ್ರಿಲ್ 29ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 47ನೇ ಪಂದ್ಯದಲ್ಲಿ ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಾಧಾರಣ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಕಂಡರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ವರುಣ್ ಚಕ್ರವರ್ತಿ ಸ್ಪಿನ್ ಬಲೆಗೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್ ಯಾವುದೇ ಅರ್ಧಶತಕಗಳಿಲ್ಲದೆ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 154 ರನ್‌ಗಳ ಗುರಿ ನೀಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಮತ್ತು ಜೇಕ್ ಫ್ರೆಸರ್-ಮೆಕ್‌ಗುರ್ಕ್ ಆಕ್ರಮಣಕಾರಿ ಆಟಕ್ಕೆ ಮುಂದಾದರೂ, ದೊಡ್ಡ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ಈ ಜೋಡಿ ಮೊದಲ ವಿಕೆಟ್‌ಗೆ 1.3 ಓವರ್‌ಗಳಲ್ಲಿ 17 ರನ್‌ಗಳ ಜೊತೆಯಾಟ ನೀಡಿದರು.
ಈ ವೇಳೆ ಪೃಥ್ವಿ ಶಾ 13 ರನ್ ಗಳಿಸಿ ಔಟಾದರೆ, ಜೇಕ್ ಫ್ರೆಸರ್-ಮೆಕ್‌ಗುರ್ಕ್ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಶಾಯ್ ಹೋಪ್ 6 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಈ ವೇಳೆ ನಾಯಕ ರಿಷಭ್ ಪಂತ್ ಮತ್ತು ಅಭಿಷೇಕ್ ಪೊರೆಲ್ ಜೊತೆಗೂಡಿ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಈ ವೇಳೆ 15 ಎಸೆತಗಳಲ್ಲಿ 18 ರನ್ ಗಳಿಸಿದ್ದ ಅಭಿಷೇಕ್ ಪೊರೆಲ್ ಔಟಾದರು. ಬಳಿಕ ಉತ್ತಮವಾಗಿ ಆಡುತ್ತಿದ್ದ ನಾಯಕ ರಿಷಭ್ ಪಂತ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 27 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ 15 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ 4 ರನ್, ಕುಮಾರ್ ಕುಶಾಗ್ರ 1 ರನ್ ಗಳಿಸಿದರೆ, ಕೊನೆಯಲ್ಲಿ ಕುಲದೀಪ್ ಯಾದವ್ 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ ಅಜೆಯ 35 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ಉಳಿದಂತೆ ರಸಿಕ್ ಸಲಾಂ 8 ರನ್ ಮತ್ತು ಲಿಜಾಡ್ ವಿಲಿಯಮ್ಸ್ 1 ರನ್ ಗಳಿಸಿದರು.
ಬೌಲಿಂಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರೆ, ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು. ವೈಭವ್ ಅರೋರಾ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್ ಮತ್ತು ಸುನಿಲ್ ನರೈನ್ ತಲಾ ಒಂದೊಂದು ವಿಕೆಟ್ ಪಡೆದರು.