ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎದುರು ಕೋಲ್ಕತ್ತಾ ನೈಟ್ ರೈಡರ್ಸ್ ಸೋಲು ಕಂಡಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ 2025 ರ 21ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 15 ರನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ಮಣಿಸಿದೆ. ಉಭಯ ತಂಡಗಳ ಟಾಪ್ ಆರ್ಡರ್‌ಗಳಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೆಕೆಆರ್ ಪರ ನಾಯಕ ಅಜಿಂಕ್ಯಾ ರಹಾನೆ 61 ರನ್‌ಗಳನ್ನು ಬಾರಿಸಿದರೂ, ಗೆಲುವು ಸಿಗಲಿಲ್ಲ. ಇತ್ತ ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರನೇ ಗೆಲುವು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ ಆಹ್ವಾನ ಮೇರೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಲಕ್ನೋ ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 230 ರನ್ ಗಳಿಸಲು ಶಕ್ತವಾಯಿತು.

ಲಕ್ನೋ ಸೂಪರ್ ಜೈಂಟ್ಸ್ ನೀಡಿದ 239 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಭರ್ಜರಿ ಆರಂಭ ಪಡೆಯಿತು. ಕೋಲ್ಕತ್ತಾ ಮೊದಲ 6 ಓವರ್‌ಗಳಲ್ಲಿ 90 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ 15 ರನ್ ಗಳಿಸಿ ಔಟ್ ಆದರು. ನಂತರ ಒಂದಾದ ನಾಯಕಿ ಅಜಿಂಕ್ಯಾ ರಹಾನೆ ಮತ್ತು ಸುನಿಲ್ ನರೈನ್ ರನ್ ಮಳೆ ಸುರಿಸಿದರು. ಈ ಜೋಡಿ 23 ಎಸೆತಗಳಲ್ಲಿ 54 ರನ್‌ಗಳ ಜೊತೆಯಾಟ ಆಡುವಲ್ಲಿ ಯಶಸ್ವಿಯಾಯಿತು. ಏಳನೇ ಓವರ್‌ನ ಎರಡನೇ ಎಸೆತದಲ್ಲಿ ನರೈನ್ 13 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು.
ನರೈನ್ ಔಟಾದ ಬಳಿಕ ರಹಾನೆ ಅವರೊಂದಿಗೆ ವೆಂಕಟೇಶ್ ಅಯ್ಯರ್ ಸೇರಿಕೊಂಡರು. ಇಬ್ಬರೂ 40 ಎಸೆತಗಳಲ್ಲಿ 71 ರನ್ ಸೇರಿಸಿದರು. ಈ ಹಂತದಲ್ಲಿ ಕೋಲ್ಕತ್ತಾ ಸುಲಭವಾಗಿ ಗುರಿ ಮುಟ್ಟಲಿದೆ ಎಂದು ಕಾಣುತ್ತಿತ್ತು. ಇಂತಹ ಸಂದರ್ಭದಲ್ಲಿ ಲಕ್ನೋ ಬೌಲರ್ಸ್ ಮರಳಿ ಪಂದ್ಯವನ್ನು ತಮ್ಮಡೆ ಮಾಡಿಕೊಂಡರು. ಶಾರ್ದೂಲ್ ಠಾಕೂರ್ ಎಸೆತದಲ್ಲಿ ರಹಾನೆ 35 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದರು. ವೆಂಕಟೇಶ್ ಅಯ್ಯರ್ 29 ಎಸೆತಗಳಲ್ಲಿ 45 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಕೊನೆಯ ಓವರ್‌ಗಳಲ್ಲಿ ಕೋಲ್ಕತ್ತಾದ ಇನ್ನಿಂಗ್ಸ್ ಹಳಿ ತಪ್ಪಿತು. ರಮಣದೀಪ್ ಸಿಂಗ್ 1 ರನ್ ಗಳಿಸಿ ಔಟಾದರೆ, ಅಂಗ್‌ಕ್ರಿಶ್ ರಘುವಂಶಿ 5 ರನ್ ಗಳಿಸಿ ಔಟಾದರು, ಆಂಡ್ರೆ ರಸೆಲ್ 7 ರನ್ ಗಳಿಗೆ ಆಟ ನಿಲ್ಲಿಸಿದರು. ಈ ಮೂವರ ವೈಫಲ್ಯದಿಂದಾಗಿ ಎಲ್ಲಾ ಒತ್ತಡ ರಿಂಕು ಸಿಂಗ್ ಮೇಲೆ ಬಂತು. ಅವರಿಗೆ ಬೆಂಬಲ ನೀಡಲು ಇನ್ನೊಂದು ತುದಿಯಲ್ಲಿ ಯಾವುದೇ ಬ್ಯಾಟರ್ ಇರಲಿಲ್ಲ. ಇದರ ಪರಿಣಾಮಗಳನ್ನು ತಂಡ ಅನುಭವಿಸಬೇಕಾಯಿತು.
ರಿಂಕು 15 ಎಸೆತಗಳಲ್ಲಿ 38 ರನ್ ಗಳಿಸಿದರೆ, ಹರ್ಷಿತ್ ರಾಣಾ 9 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗುಳಿದರು. ಲಕ್ನೋ ಪರ ಆಕಾಶ್ ದೀಪ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು. ಅವೇಶ್ ಖಾನ್, ದಿಗ್ವೇಶ್ ರಾಠಿ ಮತ್ತು ರವಿ ಬಿಷ್ಣೋಯ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯಾ ರಹಾನೆ ಟಾಸ್ ಗೆದ್ದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಈ ಆಹ್ವಾನದ ಮೇರೆಗೆ ಲಕ್ನೋ ಪರ ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಆರಂಭಿಕರಾಗಿ ಕಣಕ್ಕಿಳಿದರು. ತವರಿನ ಪಿಚ್ ಲಾಭ ಪಡೆಯಲು ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ ಮಾಡಿದ ಲೆಕ್ಕಚಾರವನ್ನು ಐಡೆನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಜೋಡಿ ಉಲ್ಟಾ ಮಾಡಿತು.
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಿಸಿಲಿನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಮಾರ್ಕ್ರಾಮ್ ಮತ್ತು ಮಾರ್ಷ್ ಕೆಕೆಆರ್ ಬೌಲರ್ಸ್‌ಗೆ ಬೆಂಡೆತ್ತಿದರು. ಮೊದಲ ವಿಕೆಟ್‌ಗೆ ಈ ಜೋಡಿ 99 ರನ್‌ಗಳ ಜೊತೆಯಾಟ ಆಡುವ ಮೂಲಕ ಲಕ್ನೋ ತಂಡಕ್ಕೆ ಅದ್ಭುತ ಆರಂಭ ನೀಡಿದರು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ ಮಾರ್ಕ್ರಾಮ್ ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್ ಕಳೆದುಕೊಂಡರು. ಅವರು 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 47 ರನ್ ಬಾರಿಸಿ ಲಕ್ನೋ ತಂಡಕ್ಕೆ ನೆರವಾದರು.
ಮಾರ್ಕ್ರಾಮ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ಅವರು ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಿದರು. ಮಾರ್ಷ್ ಕೂಡ ಕೆಕೆಆರ್ ಬೌಲರ್ಸ್‌ಗೆ ಹಿಗ್ಗಾ ಮುಗ್ಗ ಬಾರಿಸಿದರು. ಪೂರನ್ ಮತ್ತು ಮಾರ್ಷ್ 71 ರನ್ ಗಳ ಬಿರುಸಿನ ಜೊತೆಯಾಟ ಆಡುವ ಮೂಲಕ ಲಕ್ನೋ ತಂಡದ ಸ್ಕೋರ್ ಹೆಚ್ಚಿಸಿದರು. ಅದ್ಭುತವಾಗಿ ಆಡುತ್ತಿದ ಮಾರ್ಷ್ 48 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಅಬ್ದುಲ್ ಸಮದ್ ಕೂಡ ಕೇವಲ 6 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಸತತ ಎರಡು ವಿಕೆಟ್ ಬಿದ್ದರೂ ತಲೆ ಕೆಡಿಸಿಕೊಳ್ಳದ ನಿಕೋಲಸ್ ಪೂರನ್ ಈಡನ್ ಗಾರ್ಡನ್ಸ್ ಮೈದಾನದ ಎಲ್ಲೆಡೆ ಬೌಂಡರಿ-ಸಿಕ್ಸರ್ ಬಾರಿಸಿದರು. ನಿಕೋಲಸ್ ಪೂರನ್ ಬ್ಯಾಟಿಂಗ್ ಅಬ್ಬರವನ್ನು ತಡಿಯಲು ಕೆಕೆಆರ್ ತಂಡದ ಯಾವ ಬೌಲರ್‍ನಿಂದಲ್ಲೂ ಸಾಧ್ಯವಾಗಲಿಲ್ಲ. ಕೆಕೆಆರ್ ತಂಡಕ್ಕೆ ತವರಿನಲ್ಲಿ ಕಡಿಮೆ ಸ್ಕೋರ್‍ಗೆ ಲಕ್ನೋ ತಂಡವನ್ನು ಕಟ್ಟಿ ಹಾಕುವಲ್ಲಿ ಹಿಂದೆಯುಳಿತು. ಪೂರನ್ 36 ಎಸೆತಗಳಲ್ಲಿ 7 ಬೌಂಡರಿ ಮತ್ತು 8 ಸಿಕರ್ಸ್ ನೆರವಿನಿಂದ ಅಜೇಯ 87 ರನ್ ಚಚ್ಚಿ ಹಾಕಿದರು. ಕೊನೆಯಲ್ಲಿ ಡೇವಿಡ್ ಮಿಲ್ಲರ್ 4 ರನ್ ಗಳಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ವೈಭವ್ ಅರೋರಾ, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್‌ಕೀಪರ್), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ಅವೇಶ್ ಖಾನ್, ದಿಗ್ವೇಶ್ ಸಿಂಗ್ ರಾಠಿ.