ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ದಾಖಲೆಯ ಗೆಲುವು ಸಾಧಿಸಿತು.
ಕೋಲ್ಕತ್ತಾ ನೀಡಿದ 262 ರನ್‌ಗಳ ಶಿಖರವನ್ನು ಪಂಜಾಬ್ ಕಿಂಗ್ಸ್ ಇನ್ನು 8 ಎಸೆತ ಬಾಕಿ ಇರುವಂತೆ ಚೇಸ್ ಮಾಡಿ ವಿಶ್ವ ದಾಖಲೆ ಮಾಡಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಪಂಜಾಬ್ ತಂಡದ ಮೂವರು ಸ್ಪೋಟಕ ಬ್ಯಾಟರ್ಸ್.

ಕೆಕೆಆರ್ ಕೊಟ್ಟ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಿದ ಪಂಜಾಬ್ ಪರ ಜಾನಿ ಬೈರ್ಸ್ಟೋವ್ ಕೇವಲ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 9 ಸಿಕ್ಸರ್‌ಗಳ ಮೂಲಕ ಅಜೇಯ 108 ರನ್ ಗಳಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಶಶಾಂಕ್ ಸಿಂಗ್ ಕೂಡ ಕೇವಲ 28 ಎಸೆತಗಳಲ್ಲಿ ಮನಮೋಹಕ 8 ಸಿಕ್ಸರ್ ಹಾಗು ೨ ಬೌಂಡರಿ ಸಹಾಯದಿಂದ ಅಜೇಯ 68 ರನ್‌ಗಳಿಸಿ ಗೆಲುವಿನಲ್ಲಿ ಬೈರ್ಸ್ಟೋವ್ ಜೊತೆ ಮುಂದಾಳತ್ವ ವಹಿಸಿದರು. ಇದಕ್ಕೂ ಮೊದಲು ಆರಂಭಿಕ ಪ್ರಭಾಸಿಮ್ರಾನ್ ಸಿಂಗ್ ಅಬ್ಬರದ ಬ್ಯಾಟಿಂಗ್ ನಡೆಸಿದರು. 20 ಎಸೆತಗಳಲ್ಲಿ 54 ರನ್ ಗಳಿಸಿ ಔಟ್ ಆದರು. ಇನ್ನೊಂದೆಡೆ ರಿಲೀ ರೂಸೋ 26 ರನ್‌ಗಳನ್ನು ಕಲೆ ಹಾಕಿದರು.
ಈ ಮೂಲಕ ಪಂಜಾಬ್ ಕಿಂಗ್ಸ್ ಕೇವಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 18.4 ಓವರ್‌ಗಳಲ್ಲಿ 262 ರನ್‌ಗಳ ಬೃಹತ್ ಮೊತ್ತವನ್ನು ತಲುಪಿ ವಿಶ್ವ ದಾಖಲೆ ಬರೆಯಿತು. ಈವರೆಗೆ ಟಿ20 ಕ್ರಿಕೆಟ್ ಮಾದರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 2023ರಲ್ಲಿ 259 ರನ್‌ಗಳನ್ನು 18.5 ಓವರ್‌ಗಳಲ್ಲಿ ಚೇಸ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕೆಕೆಆರ್ ವಿರುದ್ಧ ಪಂಜಾಬ್ 262 ರನ್‌ಗಳ ಬೃಹತ್ ಮೊತ್ತ ಚೇಸ್ ಮಾಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಮೊತ್ತವನ್ನು ಚೇಸ್ ಮಾಡಿದ ವಿಶ್ವದ ಮೊದಲ ತಂಡವಾಗಿ ಹೊರಹೊಮ್ಮಿದೆ.
ಈ ದಾಖಲೆ ಜೊತೆಗೆ ಪಂಜಾಬ್ ತಂಡಕ್ಕೆ ಮೊತ್ತೊಂದು ದಾಖಲೆ ಮುರಿಯುವ ಅವಕಾಶವಿತ್ತು. 2016ರಲ್ಲಿ ಇದೇ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 14.1 ಓವರ್‌ಗಳಲ್ಲಿ 200 ರನ್‌ಗಳನ್ನು ಬಾರಿಸಿತ್ತು. ಈ ಒಂದು ರೆಕಾರ್ಡ್ ಅನ್ನು ಶುಕ್ರವಾರ ಕೆಕೆಆರ್ ವಿರುದ್ಧ ಪಂಜಾಬ್ ಚೇಸಿಂಗ್ ಮಾಡುವಾಗ ಬ್ರೇಕ್ ಮಾಡುವ ಹತ್ತಿರ ಬಂದರು ಕೂಡ ಸಾಧ್ಯವಾಗಲಿಲ್ಲ. ಸದ್ಯ ಆರ್‌ಸಿಬಿ ತಂಡ ಈ ದಾಖಲೆ ಸದ್ಯ ಸೇಫ್ ಆಗಿದೆ.
ಮಳೆ ಬಂದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಪ್ರಕಾರ 15 ಓವರ್‌ಗಳಿಗೆ ಪಂಜಾಬ್ ಮತ್ತು ಆರ್‌ಸಿಬಿ ನಡುವೆ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಕೇವಲ 50 ಎಸೆತಗಳಲ್ಲಿ 113 ರನ್‌ಗಳನ್ನು ಹೊಡೆದಿದ್ದರು. ಕೆರಿಬಿಯನ್ ದೈತ್ಯ ಬ್ಯಾಟರ್ ಕ್ರೀಸ್ ಗೇಲ್ ಕೂಡ ಕೇವಲ 32 ಎಸೆತಗಳಲ್ಲಿ 73 ರನ್‌ಗಳನ್ನು ಸಿಡಿಸಿದ್ದರು. ಕೆ.ಎಲ್ ರಾಹುಲ್ ಅಜೇಯ 16 ರನ್ ಗಳಿಸಿದ್ದರು.
ಹೀಗಾಗಿ 15 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಆರ್‌ಸಿಬಿ 211 ರನ್ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್ 120 ರನ್‌ಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡು ಆರ್‌ಸಿಬಿ ಎದುರು ಸೋಲಿಗೆ ಶರಣಾಗಿತ್ತು.