ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 42ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ಎದುರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
ಉತ್ತಮ ಆರಂಭ ಪಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಪಂಜಾಬ್ ತಂಡಕ್ಕೆ 262 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ನೀಡಿದೆ. ಪಂಜಾಬ್ ಬೌಲರ್ಸ್ ಕೋಲ್ಕತ್ತಾ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೆಕೆಆರ್ 6 ವಿಕೆಟ್‌ಗಳನ್ನು ಕಳೆದುಕೊಂಡು 262 ರನ್‌ಗಳನ್ನು ಕಲೆ ಹಾಕಿತು.

ಟಾಸ್ ಸೋತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪಂಜಾಬ್ ನಾಯಕ ಸ್ಯಾಮ್ ಕರ್ರಾನ್ ಆಹ್ವಾನದ ಮೇರೆಗೆ ಬ್ಯಾಟಿಂಗ್ ಆರಂಭಿಸಿತು. ಕೆಕೆಆರ್ ಪರ ಎಂದಿನಂತೆ ಫಿಲಿಪ್ ಸಾಲ್ಟ್ ಮತ್ತು ಸುನಿಲ್ ನರೈನ್ ಜೋಡಿ ಸಿಡಿಲಬ್ಬರ ಬ್ಯಾಟಿಂಗ್ ಮಾಡಿತು. ಹೀಗಾಗಿ ಕೆಕೆಆರ್ ಶುರುವಿನಲ್ಲೆ ಅದ್ಭುತವಾಗಿ ರನ್ ಗಳಿಸಿತು.
ಫಿಲಿಪ್ ಸಾಲ್ಟ್ ಮತ್ತು ಸುನಿಲ್ ನರೈನ್ ಮನಬಂದಂತೆ ಪಂಜಾಬ್ ಬೌಲರ್ಸ್‌ಗಳನ್ನು ದಂಡಿಸಿದರು. ಬೌಂಡರಿ ಸಿಕ್ಸರ್ ಮಳೆಗೈದ ಈ ಇಬ್ಬರು ಆಟಗಾರರು ಮೊದಲ ವಿಕೆಟ್ 131 ರನ್‌ಗಳ ಜೊತೆಯಾಟವಾಡಿರು. ಸ್ಪೋಟಕ ಬ್ಯಾಟಿಂಗ್ ಮಾಡಿದ ಸುನಿಲ್ ನರೈನ್ ಕೇವಲ 31 ಎಸೆತಗಳಲ್ಲಿ 9 ಬೌಂಡರಿ ಹಾಗು 4 ಸಿಕ್ಸರ್ ನೆರವಿನಿಂದ 71 ರನ್ ಪೇರಿಸಿದರು. ಇನ್ನೇನು ನರೈನ್ ಐಪಿಎಲ್‌ನಲ್ಲಿ ಎರಡನೇ ದಾಖಲಿಸುತ್ತಾರೆ ಎನ್ನುವಷ್ಟರಲ್ಲೆ ಪಂಜಾಬ್ ಬೌಲರ್ ರಾಹುಲ್ ಚಹಾರ್ ಬೌಲಿಂಗ್ ವಿಕೆಟ್ ಕಳೆದುಕೊಂಡರು.
ಈ ಹಂತದಲ್ಲಿ ಸುನಿಲ್ ನರೈನ್‌ಗೆ ಸಾಥ್ ನೀಡಿದ ಮತ್ತೋರ್ವ ಆರಂಭಿಕ ಫಿಲಿಪ್ ಸಾಲ್ಟ್ ಬೆಂಕಿ ಬ್ಯಾಟಿಂಗ್ ನಡೆಸಿದರು. ಮೈದಾನದ ಎಲ್ಲೆಡೆ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಫಿಲಿಪ್ ಸಾಲ್ಟ್ ಎದುರಿಸಿದ 37 ಎಸೆತಗಳಲ್ಲಿ 6 ಬೌಂಡರಿ ಹಾಗು 6 ಸಿಕ್ಸರ್ ಬಾರಿಸಿ ಪಂಜಾಬ್ ಬೌಲಿಂಗ್ ವಿಭಾಗವನ್ನು ಧೂಳಿಪಟ ಮಾಡಿದರು. ಈ ವೇಳೆ ಸ್ಯಾಮ್ ಕರ್ರಾನ್ ಅವರು ಫಿಲಿಪ್ ಸಾಲ್ಟ್ ವಿಕೆಟ್ ಪಡೆದುಕೊಂಡರು.
ನಂತರ ಬಂದ ಆಂಡ್ರೆ ರಸೆಲ್ (24) ಎರಡು ಸಿಕ್ಸರ್ ಮತ್ತು ಬೌಂಡರಿ ಹೊಡೆದ ಅರ್ಶ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಔಟ್ ಆದರು. ಬಳಿಕ ಒಂದಾದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ವೆಂಕಟೇಶ್ ಅಯ್ಯರ್ ಬಿರುಸಿನ ಬ್ಯಾಟಿಂಗ್ ಮಾಡಿದರು. ಮೂರು ಅರ್ಕಷಕ ಸಿಕ್ಸರ್ ಹೊಡೆದು ಅಪಾಯಕಾರಿಯಾಗಿ ಕಾಣಿಸುತ್ತಿದ್ದ ಶ್ರೇಯಸ್ ಅಯ್ಯರ್ (28) ಅವರನ್ನು ಅರ್ಶ್‌ದೀಪ್ ಸಿಂಗ್ ಔಟ್ ಮಾಡಿದರು.
ರಿಂಕು ಸಿಂಗ್ ಅವರಿಂದ ಮತ್ತೆ ಹೇಳಿಕೊಳ್ಳುವಂತ ಪ್ರದರ್ಶನ ಮೂಡಿ ಬರಲಿಲ್ಲ. ಹೀಗಾಗಿ ಕೇಬಲ ಐದು ರನ್‌ಗೆ ರಿಂಕು ಹರ್ಷಲ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ವೆಂಕಟೇಶ್ ಅಯ್ಯರ್ ಕೊನೆಯಲ್ಲಿ 39 ರನ್ ಗಳಿಸಿ ರನ್ ಔಟ್ ಆದರು.
ಇತ್ತ ರಮಣದೀಪ್ ಸಿಂಗ್ 6 ರನ್ ಹೊಡೆದು ವಿಕೆಟ್ ಉಳಿಸಿಕೊಂಡರು.
ಪಂಜಾಬ್ ಪರ ದುಬಾರಿ ಬೌಲಿಂಗ್ ಮಾಡಿದ ಬೌಲರ್ಸ್ ಕೆಕೆಆರ್ ರನ್ ಹೊಳೆ ಹರಿಸಲು ಕಾರಣರಾದರು. ಅರ್ಶ್‌ದೀಪ್ ಸಿಂಗ್ 2 ವಿಕೆಟ್ ಪಡೆದರೆ, ಸ್ಯಾಮ್ ಕರ್ರಾನ್, ಹರ್ಷಲ್ ಪಟೇಲ್ ಹಾಗು ರಾಹುಲ್ ಚಹಾರ್ ಒಂದು ವಿಕೆಟ್ ತೆಗೆಯುವುದಕ್ಕೆ ಸೀಮಿತವಾದರು.