IPL 2023: KKR ವಿರುದ್ಧ RCB ಸೋಲಿಗೆ ಕಾರಣವಾಗಿದ್ದು ಈ 4 ಅಂಶಗಳು
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಯಲ್ಲಿ ಆರ್‌ಸಿಬಿ ತನ್ನ ಮೊದಲ ಸೋಲಿನ ರುಚಿ ಕಂಡಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನಿರೀಕ್ಷಿಸದ ರೀತಿಯಲ್ಲಿ ಸೋಲು ಕಂಡಿದ್ದು ಅಭಿಮಾನಿಗಳಿಗೆ ಆಘಾತ ನೀಡಿದೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ ವಿಶ್ವಾಸ ಮೂಡಿಸಿದ್ದ ಆರ್‌ಸಿಬಿ ತಂಡ ಎರಡನೇ ಪಂದ್ಯದಲ್ಲಿ ಆಡುದ ರೀತಿ ನಿರಾಸೆ ಮೂಡಿಸಿದೆ.
ಟಾಸ್ ಗೆದ್ದು ಆರಂಭಿಕ ಹಂತದಲ್ಲಿ ಅದ್ಭುತ ಯಶಸ್ಸು ಸಾಧಿಸಿದರೂ ಆರ್‌ಸಿಬಿ ಬಳಿಕ ಆ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಬೌಲಿಂಗ್ ವಿಭಾಗದ ಜೊತೆಗೆ ಬ್ಯಾಟಿಂಗ್ ಕೂಡ ಸಂಪೂರ್ಣವಾಗಿ ಕೈಕೊಟ್ಟ ಕಾರಣದಿಂದಾಗಿ ಆರ್‌ಸಿಬಿ ತಂಡ ಕೆಕೆಆರ್ ವಿರುದ್ಧ ಹೀನಾಯ ಸೋಲು ಕಾಣುವಂತಾಗಿದೆ. ಹಾಗಾದರೆ ಈ ಕೆಕೆಆರ್ ವಿರುದ್ಧದ ಸೋಲಿಗೆ ಕಾರಣವಾದ ನಾಲ್ಕು ಪ್ರಮುಖ ಅಂಶಗಳು ಯಾವುದು? ಮುಂದೆ ಓದಿ..

ಬೌಲಿಂಗ್‌ನಲ್ಲಿನ ಅಸ್ಥಿರತೆ
ಇತ್ತೀಚಿನ ಒಂದೆರಡು ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನ ಗಮನಾರ್ಹವಾಗಿ ಪ್ರಗತಿ ಕಂಡಿತ್ತು. ತಂಡದ ಯಶಸ್ಸಿನಲ್ಲಿಯೂ ಇದು ಮಹತ್ವದ ಪಾತ್ರವನ್ನು ವಹಿಸಿತ್ತು. ಅದಕ್ಕೆ ಪೂರಕವಾಗಿ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ಕೂಡ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಅಂತಿಮ ಹಂತದಲ್ಲಿ ಆರ್‌ಸಿಬಿ ಬೌಲರ್‌ಗಳು ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿಯೂ ಆರ್‌ಸಿಬಿ ತಂಡ ಆರಂಭದಲ್ಲಿ ಅಗ್ಗರ ಮೊತ್ತಕ್ಕೆ ಐದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೆಳ ಕ್ರಮಾಂಕದ ಆಟಗಾರರಾದ ಶಾರ್ದೂಲ್ ಠಾಕೂರ್ ಹಾಗೂ ರಿಂಕು ಸಿಂಗ್ ಅವರನ್ನು ಕಟ್ಟಿ ಹಾಕುವಲ್ಲಿ ಆರ್‌ಸಿಬಿ ತಂಡ ಸಂಪೂರ್ಣವಾಗಿ ವಿಫಲವಾಯಿತು.
ಶಾರ್ದೂಲ್ ಠಾಕೂರ್ ಸ್ಪೋಟಕ ಆಟ
ಆರ್‌ಸಿಬಿ ತಂಡದ ಬೌಲರ್‌ಗಳಿ ಮೇಲುಗೈ ಸಾಧಿಸಿ ಕೆಕೆಆರ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು ಎಂಬಂಥಾ ಸನ್ನಿವೇಶದಲ್ಲಿ ಸಿಡಿದೆದ್ದು ಅಬ್ಬರಿಸಿದ್ದು ಶಾರ್ದೂಲ್ ಠಾಕೂರ್. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಠಾಕೂರ್ ಯಾರೂ ನಿರೀಕ್ಷಿಸದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಶಾರ್ದೂಲ್ ಠಾಕೂರ್ ಭರ್ಜರಿ 68 ರನ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನ ಆರ್‌ಸಿಬಿಗೆ ದೊಡ್ಡ ಆಘಾತ ನೀಡಿದ್ದು ಪಂದ್ಯವನ್ನು ಬಹುತೇಕ ಆರ್‌ಸಿಬಿ ಕೈಯಿಂದ ಜಾರುವಂತೆ ಮಾಡಿತು.
ಅಚ್ಚರಿ ಮೂಡಿಸಿದ ಆರ್‌ಸಿಬಿ ಮಧ್ಯಮ ಕ್ರಮಾಂಕ
ಇನ್ನು ಆರ್‌ಸಿಬಿ ತಂಡ ಈ ಪಂದ್ಯದಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿ ಮೊದಲ ಐದು ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು. 4.5 ಓವರ್‌ಗಳಲ್ಲಿ ಈ ಜೋಡಿ 44 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟಿತು. ಆದರೆ ಈ ಜೋತೆಯಾಟ ಮುರಿಯುವುದರ ಮೂಲಕ ಆರ್‌ಸಿಬಿ ತಂಡದ ಕುಸಿತ ಆರಂಭವಾಯಿತು. ಅದರಲ್ಲೂ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಯಾವೊಬ್ಬ ಆಟಗಾರ ಕೂಡ ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾಗಿದ್ದು ಒಂದಂಕಿಗೆ ಔಟಾಗಿ ನಿರಾಸೆ ಮೂಡಿಸಿದ್ದಾರೆ. ಇದು ಆರ್‌ಸಿಬಿ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗಲು ಕಾರಣವಾಯಿತು.
ಕೆಕೆಆರ್ ಸ್ಪಿನ್ನರ್‌ಗಳ ಆರ್ಭಟ
ಇನ್ನು ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್‌ಗಳು ಅಕ್ಷರಶಃ ಆರ್‌ಸಿಬಿ ದಾಂಡಿಗರನ್ನು ಕಡೆವಿಹಾಕಿದ್ದಾರೆ. ವರುಣ್ ಚಕ್ರವರ್ತಿ, ಸುಯಾಶ್ ಶರ್ಮಾ ಹಾಗೂ ಸುನಿಲ್ ನರೈನ್ ಸೇರಿಕೊಂಡು ಆರ್‌ಸಿಬಿ ಬ್ಯಾಟಿಂಗ್ ವಿಭಾಗವನ್ನು ಸುಲಭಕ್ಕೆ ಕಟ್ಟಿ ಹಾಕಿದರು. ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ ಕೆಕೆಆರ್ ಸ್ಪಿನ್ನರ್‌ಗಳಿಗೆ ಸುಲಭವಾಗಿ ವಿಕೆಟ್ ಒಪ್ಪಿಸಿದ್ದು ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications