IPL 2024: ಕರ್ಣ್ ಶರ್ಮಾ ಕೊನೇ ಕ್ಷಣದ ಹೋರಾಟ ವ್ಯರ್ಥ; ಆರ್‌ಸಿಬಿ ವಿರುದ್ಧ ರೋಚಕ ಗೆಲುವು ಸಾಧಿಸಿದ ಕೆಕೆಆರ್
ಭಾನುವಾರ, ಏಪ್ರಿಲ್ 21ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಕೊನೆಯ ಎಸೆತದಲ್ಲಿ 1 ರನ್‌ನಿಂದ ರೋಚಕ ಗೆಲುವು ಸಾಧಿಸಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2024ರಲ್ಲಿ ಸೋಲಿನ ಕೂಪದಿಂದ ಎದ್ದುಬರಲು ಮತ್ತೊಮ್ಮೆ ವಿಫಲವಾಗಿದ್ದು, ಪ್ಲೇಆಫ್ ಹಂತ ತಲುಪುವ ಕನಸು ಬಹುತೇಕ ಅಂತ್ಯಗೊಂಡಂತಾಗಿದೆ. ಆಡಿದ 8 ಪಂದ್ಯಗಳಲ್ಲಿ 7 ಸೋಲು ಮತ್ತು 1 ಗೆಲುವು ಸಾಧಿಸಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಮುಂದುವರೆದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫಿಲ್ ಸಾಲ್ಟ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು.
223 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ವಿಲ್ ಜ್ಯಾಕ್ಸ್ ಮತ್ತು ರಜತ್ ಪಾಟಿದಾರ್ ಅವರ ಸ್ಫೋಟಕ ಅರ್ಧಶತಕಗಳ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 1 ರನ್‌ನಿಂದ ರೋಚಕ ಸೋಲು ಅನುಭವಿಸಿತು.

19ನೇ ಓವರ್‌ನ ಕೊನೆಯ ಎಸೆತದಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಬೀಳುವುದರೊಂದಿಗೆ ಆರ್‌ಸಿಬಿ ಕನಸು ಕಮರಿ ಹೋಗಿತ್ತು. ಆದರೆ ಕೊನೆಯ ಓವರ್‌ನಲ್ಲಿ ಆರ್‌ಸಿಬಿ ಗೆಲುವಿಗೆ 21 ರನ್‌ಗಳು ಬೇಕಾಗಿದ್ದಾಗ ಕರ್ಣ್ ಶರ್ಮಾ ಅವರು ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಮೂರು ಸಿಕ್ಸರ್ ಬಾರಿಸಿ ಗೆಲುವಿನ ಆಸೆ ಚಿಗುರಿಸಿದ್ದರು.
ನಂತರ ಕೊನೆಯ 2 ಎಸೆತಗಳಲ್ಲಿ 3 ರನ್ ಬೇಕಾಗಿದ್ದಾಗ ಮಿಚೆಲ್ ಸ್ಟಾರ್ಕ್ ಹಿಡಿದ ಅದ್ಭುತ ಕ್ಯಾಚ್‌ಗೆ ಕರ್ಣ್ ಶರ್ಮಾ ಔಟಾದರು. ಅಂತಿಮ ಎಸೆತದಲ್ಲಿ 3 ರನ್ ಬೇಕಾಗಿದ್ದಾಗ ಲಾಕಿ ಫರ್ಗ್ಯುಸನ್ 2 ರನ್ ಓಡಲು ಹೋಗಿ ರನೌಟ್ ಆದರು. ಈ ಮೂಲಕ 1 ರನ್‌ನಿಂದ ಸೋಲಬೇಕಾಯಿತು.
ಆರ್‌ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 2.1 ಓವರ್‌ಗಳಲ್ಲಿ 27 ರನ್‌ಗಳ ಜೊತೆಯಾಟವಾಡಿತು.

ಈ ವೇಳೆ ದೊಡ್ಡ ಇನ್ನಿಂಗ್ಸ್‌ನ ಮುನ್ಸೂಚನೆ ನೀಡಿದ್ದ ವಿರಾಟ್ ಕೊಹ್ಲಿ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 18 ರನ್ ಗಳಿಸಿ ಔಟಾದರು. ನಂತರದ ಓವರ್‌ನ ಮೊದಲ ಎಸೆತದಲ್ಲೇ ಫಾಫ್ ಡು ಪ್ಲೆಸಿಸ್ ಕೇವಲ 7 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.
ನಂತರ ಬಂದ ವಿಲ್ ಜ್ಯಾಕ್ಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆರ್‌ಸಿಬಿ ಗೆಲುವನ್ನು ಜೀವಂತವಾಗಿಟ್ಟಿದ್ದರು. ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಮೇತ 55 ರನ್ ಬಾರಿಸಿದರೆ, ರಜತ್ ಪಾಟಿದಾರ್ ಕೇವಲ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 52 ರನ್ ಗಳಿಸಿದರು.
ಈ ಜೋಡಿ ಮೂರನೇ ವಿಕೆಟ್‌ಗೆ 102 ರನ್‌ಗಳ ಜೊತೆಯಾಟ ನಿರ್ಮಿಸಿತು. ಆದರೆ, 2 ರನ್‌ಗಳ ಅಂತರದಲ್ಲಿ ಇಬ್ಬರೂ ಔಟಾಗುವ ಮೂಲಕ ಆರ್‌ಸಿಬಿ ಸೋಲಿನ ಹಾದಿ ಹಿಡಿಯಿತು. ಕ್ಯಾಮೆರಾನ್ ಗ್ರೀನ್ 6 ರನ್, ಸುಯಶ್ ಪ್ರಭುದೇಸಾಯಿ 24 ರನ್, ಮಹಿಪಾಲ್ ಲೊಮ್ರೋರ್ 4 ರನ್ ಗಳಿಸಿದರು.
ಇನ್ನು ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 25 ರನ್ ಗಳಿಸಿದರೆ, ಕರ್ಣ್ ಶರ್ಮಾ 7 ಎಸೆತಗಳಲ್ಲಿ 3 ಸಿಕ್ಸರ್‌ಗಳ ಸಮೇತ 20 ರನ್ ಗಳಿಸಿದರು. ಆದರೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಬೌಲಿಂಗ್‌ನಲ್ಲಿ ಕೆಕೆಆರ್ ತಂಡದ ಪರ ಆಂಡ್ರೆ ರಸೆಲ್ 3 ಓವರ್‌ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಹರ್ಷಿತ್ ರಾಣಾ 4 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದರು. ಸುನಿಲ್ ನರೈನ್ 4 ಓವರ್‌ಗಳಲ್ಲಿ 34 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಮಿಚೆಲ್ ಸ್ಟಾರ್ಕ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಜೋಡಿ ಮೊದಲ ವಿಕೆಟ್‌ಗೆ 4.2 ಓವರ್‌ಗಳಲ್ಲಿ 56 ರನ್‌ಗಳ ಜೊತೆಯಾಟ ನಿರ್ಮಿಸಿದರು. ಈ ವೇಳೆ ಕೇವಲ 14 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಮೇತ 48 ರನ್ ಗಳಿಸಿದ್ದ ಫಿಲ್ ಸಾಲ್ಟ್ ಔಟಾದರು.
ನಂತರ ಆಂಗ್‌ಕ್ರಿಶ್ ರಘುವಂಶಿ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಆರಂಭಿಕ ಬ್ಯಾಟರ್ ಸುನಿಲ್ ನರೈನ್ 15 ಎಸೆತಗಳಲ್ಲಿ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನು ವೆಂಕಟೇಶ್ ಅಯ್ಯರ್ 8 ಎಸೆತಗಳಲ್ಲಿ 3 ಬೌಂಡರಿ ಸಮೇತ 16 ರನ್ ಗಳಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 36 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 50 ರನ್ ಬಾರಿಸಿ ಈ ಋತುವಿನ ಮೊದಲ ಅರ್ಧಶತಕ ಗಳಿಸಿದರು.
ಕೊನೆಯಲ್ಲಿ ರಿಂಕು ಸಿಂಗ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರೆ, ಆಂಡ್ರೆ ರಸೆಲ್ 20 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಅಜೇಯ 27 ರನ್ ಮತ್ತು ರಮಣ್‌ದೀಪ್ ಸಿಂಗ್ 9 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ ಅಜೇಯ 24 ರನ್ ಬಾರಿಸಿದರು.
ಇನ್ನು ಬೌಲಿಂಗ್‌ನಲ್ಲಿ ಆರ್‌ಸಿಬಿ ತಂಡದ ಪರ ಕ್ಯಾಮೆರಾನ್ ಗ್ರೀನ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಪಡೆದರೆ, ಯಶ್ ದಯಾಳ್ 4 ಓವರ್‌ಗಳಲ್ಲಿ 56 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಮತ್ತು ಲಾಕಿ ಫರ್ಗ್ಯುಸನ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications