ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಭಾರೀ ಅಂತರದ ಸೋಲು ಕಂಡಿದೆ. ಆರಂಭದಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಯಶಸ್ಸು ಸಾಧಿಸಿದರೂ ಅದರ ಲಾಭ ಪಡೆಯಲು ವಿಫಲವಾದ ಆರ್‌ಸಿಬಿ ತಂಡಕ್ಕೆ ಆರಂಭದಲ್ಲಿ ಆಘಾತ ನೀಡಿದ್ದು ಶಾರ್ದುಲ್ ಠಾಕೂರ್. ಬ್ಯಾಟಿಂಗ್‌ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಶಾಕ್ ನೀಡಿದ ಶಾರ್ದೂಲ್ ತಂಡದ ಮೊತ್ತ 200ರ ಗಡಿ ದಾಟಲು ಕಾರಣವಾದರು.
ಈ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸ್ವತಃ ಶಾರ್ದುಲ್ ಠಾಕೂರ್ ಮಾತನಾಡಿದ್ದು ಪಂದ್ಯ ಮುಗಿದ ಬಳಿಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ಎಲ್ಲಿಂದ ಬಂತೋ ಗೊತ್ತಿಲ್ಲ ಎಂದಿರುವ ಶಾರ್ದೂಲ್ ಠಾಕೂರ್ ತಾನಾಡಿದ ಬ್ಯಾಟಿಂಗ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಠಿಣ ಪರಿಶ್ರಮದ ಕಾರಣದಿಂದಾಗಿ ಇಂಥಾ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದಿದ್ದಾರೆ ಶಾರ್ದೂಲ್ ಠಾಕೂರ್.

ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ಗೆ ಇಳಿದಾಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 89 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಲ್ಲಿಂದ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ಕೆಕೆಆರ್ ಪರವಾಗಿ ಶಾರ್ದೂಲ್ ಠಾಕೂರ್ ಅಬ್ಬರಿಸಿದರು. 29 ಎಸೆತಗಳನ್ನು ಎದುರಿಸಿದ ಠಾಕೂರ್ ಬರೊಬ್ಬರಿ 68 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು. ಇದು ಐಪಿಎಲ್ ಇತಿಹಾಸದಲ್ಲಿ 7ನೇ ಕ್ರಮಾಂದಲ್ಲಿ ಬಂದ ಎರಡನೇ ಅತಿ ಹೆಚ್ಚಿನ ಸ್ಕೋರ್ ಎಂಬುದು ಗಮನಾರ್ಹ.
ಶಾರ್ದೂಲ್ ಠಾಕೂರ್ ಹಾಗೂ ರಿಂಕು ಸಿಂಗ್ 7ನೇ ವಿಕೆಟ್‌ಗೆ 103 ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿದ್ದು ಇದರ ಪರಿಣಾಮವಾಗಿ ಕೆಕೆಆರ್ ತಂಡ ನೊಗದಿತ 20 ಓವರ್‌ಗಳಲ್ಲಿ 204 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಶಾರ್ದುಲ್‌ಗೆ ಅದ್ಭುತವಾಗಿ ಸಾರ್ಥ ನೀಡಿದ ರಿಂಕು ಸಿಂಗ್ 33 ಎಸೆತಗಳಲ್ಲಿ 46 ರನ್ ಬಾರಿಸಿ ಮಿಂಚಿದ್ದಾರೆ.
"ನನಗೂ ಕೂಡ ಇದು ಎಲ್ಲಿಂದ ಬಂತು ಎಂದು ತಿಳಿದಿಲ್ಲ. ಆದರೆ ನಾನು ಕ್ರೀಸ್‌ಗೆ ಇಳಿದಾಗ ನಾವು ಸಂಕಷ್ಟದಲ್ಲಿದ್ದೆವು. ಅತ್ಯುನ್ನತ ಮಟ್ಟದಲ್ಲಿ ಇಂತಾ ಪ್ರದರ್ಶನ ನೀಡಲು ಕೌಶಲ್ಯವೂ ಇರಬೇಕಾಗುತ್ತದೆ. ನೆಟ್ಸ್‌ಬಲ್ಲಿಯೂ ನಾವು ಬಹಳ ಪರಿಶ್ರಮ ಪಡುತ್ತೇವೆ. ಅದು ಸಹಕಾರಿಯಯಿತು" ಎಂದಿದ್ದಾರೆ ಶಾರ್ದೂಲ್ ಠಾಕೂರ್.
ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ ಬೃಜತ್ ಮೊತ್ತವನ್ನು ಬೆನ್ನಿಟ್ಟಲು ಆರಂಭಿಸಿದ ಆರ್‌ಸಿಬಿ ತಂಡಕ್ಕೆ ಕೆಕೆಆರ್ ತಂಡದ ಸ್ಪಿನ್ನರ್‌ಗಳೂ ಆಘಾತ ನೀಡಿದರು. ವರುಣ್ ಚಕ್ರವರ್ತಿ, ಸುಯಾಶ್ ಶರ್ಮಾ ಹಾಗೂ ಸುನಿಲ್ ನರೈನ್ ಬೌಲಿಂಗ್ ದಾಳಿಗೆ ಕುಸಿದ ಆರ್‌ಸಿಬಿ ತಂಡ ಕೇವಲ 123 ರನ್‌ಗಳಿಸಿ ಆಲೌಟ್ ಆಯಿತು. ವರುಣ್ ಚಕ್ರವರ್ತಿ 4 ವಿಕೆಟ್ ಪಡೆದರೆ, ಸುಯಾಶ್ 3 ಹಾಗೂ ಸುನಿಲ್ ನರೈನ್ 2 ವಿಕೆಟ್ ಸಂಪಾದಿಸಿದರು. ಒಂದು ವಿಕೆಟ್ ಶಾರ್ದೂಲ್ ಠಾಕೂರ್ ಪಾಲಾಯಿತು.
ಈ ಭರ್ಜರಿ ಪ್ರದರ್ಶನದಿಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಂತಾಗಿದೆ. ಹೀಗಾಗಿ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿಯೂ ಮೇಲುಗೈ ಸಾಧಿಸಿದ್ದು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಆರ್‌ಸಿಬಿ ಈ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿಯೂ ಭಾರೀ ಕುಸಿತ ಕಂಡಿದೆ.